ಕರಾವಳಿ ವಾಯ್ಸ್ ನ್ಯೂಸ್ 

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮ ಪಂಚಾಯತ್‌ನಲ್ಲಿ ವಾಟರ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಒಂದು ದಿನದ ಬಳಿಕ ವಲ್ಕಿ ಸಮೀಪದ ಗುಂಡಬಾಳ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮೃತರನ್ನು ಖರ್ವಾ ಗ್ರಾಮದ ಜಡ್ಡಿತ್ಲ ನಿವಾಸಿ ಗೋಪಾಲ ವೆಂಕ್ಟ ನಾಯ್ಕ (55) ಎಂದು ಗುರುತಿಸಲಾಗಿದೆ. ಅವರು ಕಳೆದ 35 ವರ್ಷಗಳಿಂದ ಖರ್ವಾ ಗ್ರಾಮ ಪಂಚಾಯತ್‌ನಲ್ಲಿ ವಾಟರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಗುರುವಾರ ಮಧ್ಯಾಹ್ನದಿಂದ ಅವರು ನಿಗೂಢವಾಗಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಹಾಗೂ ಸ್ಥಳೀಯರು ರಾತ್ರಿ ಪೂರ್ತಿ ವಿವಿಧೆಡೆ ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತು ದೂರು ದಾಖಲಿಸಲಾಗಿತ್ತು.

ದೂರಿನ ಮೇರೆಗೆ ಪೊಲೀಸರು ಹಾಗೂ ಸ್ಥಳೀಯರು ಶುಕ್ರವಾರವೂ ಶೋಧ ಕಾರ್ಯ ಮುಂದುವರಿಸಿದ್ದರು. ಸಂಜೆ ವೇಳೆ ವಲ್ಕಿ ಸಮೀಪದ ಗುಂಡಬಾಳ ನದಿಯ ದಡದ ಬಳಿ ಶವವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ಮಂಜುನಾಥ ನೇತೃತ್ವದ ತಂಡ ಸ್ಥಳೀಯರ ನೆರವಿನಿಂದ ಶವವನ್ನು ನದಿಯಿಂದ ಮೇಲಕ್ಕೆತ್ತಿ ಪರಿಶೀಲನೆ ನಡೆಸಿದೆ.

ಪರಿಶೀಲನೆ ವೇಳೆ ಶವವು ನಾಪತ್ತೆಯಾಗಿದ್ದ ಗೋಪಾಲ ವೆಂಕ್ಟ ನಾಯ್ಕ ಅವರದ್ದೇ ಎಂಬುದು ದೃಢಪಟ್ಟಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊನ್ನಾವರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.

 

 

Please Share: