ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ಹಣಕಾಸಿನ ವಿಚಾರವಾಗಿ ಉಂಟಾದ ವೈಷಮ್ಯದ ಹಿನ್ನಲೆಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಏಳು ಮಂದಿಗೆ ಗಂಭೀರ ಗಾಯಗೊಳಿಸಿದ ಘಟನೆ ತಾಲೂಕಿನ ತೆರಕನಹಳ್ಳಿಯಲ್ಲಿ ನಡೆದಿದೆ.
ಶಿರಸಿಯ ರಾಮನಬೈಲು ಭಾಗದ ಸುಮಾರು 20 ಮಂದಿಯ ಗುಂಪು ಈ ಕೃತ್ಯ ಎಸಗಿದೆ ಎನ್ನಲಾಗಿದ್ದು, ಕಬ್ಬಿಣದ ರಾಡ್, ಪಂಚ್ ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ಬಳಸಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ತೆರಕನಹಳ್ಳಿಯ ತುಕಾರಾಮ ನಾಯ್ಕ, ಸುನೀಲ ನಾಯ್ಕ, ರೇಖಾ ನಾಯ್ಕ, ಸುಭಾಸ್ ನಾಯ್ಕ, ಕವಿತಾ ನಾಯ್ಕ ಹಾಗೂ ಸುಮನಾ ಸುಭಾಸ್ ನಾಯ್ಕ ಸೇರಿದಂತೆ ಒಟ್ಟು ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಾಳಿಯಲ್ಲಿ ಕಿರುತೆರೆ ನಟ ಸಂಕೇತ್ ಮೇಸ್ತಾ ಸೇರಿದಂತೆ ನಾಗರಾಜ್ ಮೇಸ್ತಾ, ಜನ್ನು ಮೇಸ್ತಾ, ಪೃಥ್ವಿ ಶಿವರಾಜ್, ಶಿವರಾಜ್, ಗಗನ್ ಮೇಸ್ತಾ, ಶರತ್ ಮೇಸ್ತಾ, ರಫಿಕ್ ಹಾಗೂ ಇತರರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಂಕೇತ್ ಮೇಸ್ತಾ ಅವರು “ಮಾರಿಗುಡಿ” ಸೇರಿದಂತೆ ಹಲವು ಕಿರುಚಿತ್ರಗಳಲ್ಲಿ ನಟಿಸಿರುವುದು ತಿಳಿದುಬಂದಿದೆ.
ಆರೋಪಿಗಳು ಕಾರು, ಜೀಪು, ಆಟೋ ಹಾಗೂ ಬೈಕ್ಗಳಲ್ಲಿ ಬಂದು ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ತುಕಾರಾಮ ನಾಯ್ಕ ಹಾಗೂ ಸಂಕೇತ್ ಮೇಸ್ತಾ ಸಂಬಂಧಿ ನಾಗರಾಜ್ ಮೇಸ್ತಾ ನಡುವೆ ಹಣಕಾಸಿನ ವಿಚಾರವಾಗಿ ಕೆಲ ದಿನಗಳಿಂದ ವೈಮನಸ್ಸು ನಡೆಯುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
