ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯನ್ನು “ನಶೆ ಮುಕ್ತ ಜಿಲ್ಲೆ”ಯನ್ನಾಗಿಸಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಡ್ರಗ್ ಪೆಡ್ಲರ್ ಒಬ್ಬನ ವಿರುದ್ಧ ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಮುನ್ನೆಚ್ಚರಿಕಾ ಬಂಧನ ಕ್ರಮ ಜರುಗಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ದಾಂಡೇಲಿ ನಗರದ ಸುಭಾಷನಗರ ನಿವಾಸಿ ಆಯಾನ್ ಶಾನವಾಜ್ ಇಮೈಯಾಜ್ ಖಾನ್ (23) ಬಂಧಿತ ಆರೋಪಿ. ಈತನ ವಿರುದ್ಧ ದಾಂಡೇಲಿಯಲ್ಲಿ ಐದು ಹಾಗೂ ಹುಬ್ಬಳ್ಳಿಯಲ್ಲಿ ಒಂದು ಸೇರಿ ಒಟ್ಟು ಆರು ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದವು.
ಹಲವು ಬಾರಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕವೂ ಮತ್ತೆ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡು ಯುವಜನತೆಯ ಭವಿಷ್ಯ ಹಾಳು ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆ ದಾಂಡೇಲಿ ಸಿಪಿಐ ಹಾಗೂ ಡಿಎಸ್‌ಪಿ ಸಲ್ಲಿಸಿದ ವರದಿಯ ಆಧಾರದಲ್ಲಿ ಪಶ್ಚಿಮ ವಲಯ ಮಂಗಳೂರು ಐಜಿಪಿ ಅವರು ಆರೋಪಿಯನ್ನು ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶ ಹೊರಡಿಸಿದ್ದಾರೆ.
ಮಾದಕ ವಸ್ತುಗಳ ಸಾಗಣೆ ಹಾಗೂ ಮಾರಾಟದ ವಿರುದ್ಧ ಮುಂದೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದ್ದು, ಸಾರ್ವಜನಿಕರು ಡ್ರಗ್ಸ್ ಸಂಬಂಧಿತ ಮಾಹಿತಿ ನೀಡುವಂತೆ ಮನವಿ ಮಾಡಿದೆ.
