ಕರಾವಳಿ ವಾಯ್ಸ್ ನ್ಯೂಸ್ 

ಹೊನ್ನಾವರ: ನಡೆದುಕೊಂಡು ಬರುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕದ್ದು ಬೈಕ್‌ನಲ್ಲಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಂಕಿ ಪೊಲೀಸರು ಘಟನೆ ನಡೆದ ಒಂದು ಗಂಟೆಯೊಳಗೆ ಬಂಧಿಸಿರುವ ಘಟನೆ ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

Banner Ad

ತಾಲೂಕಿನ ನೆಲವಂಕಿ ರಸ್ತೆ ಮಾರ್ಗದಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಸ್ಥಳೀಯ ಪರಿಚಯಸ್ತರು ಏಕಾಏಕಿ ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಹರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಬೆಚ್ಚಿಬಿದ್ದ ಮಹಿಳೆ ಜೋರಾಗಿ ಬೊಬ್ಬೆ ಹೊಡೆದು ಕೂಗಿದ್ದು, ಕೂಗು ಕೇಳಿ ಸಮೀಪದಲ್ಲಿದ್ದ ಯುವಕನೊಬ್ಬ ತಕ್ಷಣ ಓಡಿ ಬಂದಿದ್ದಾನೆ. ಈ ವೇಳೆ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದರೂ, ಅವರ ಚಹರೆ ಹಾಗೂ ವಿವರಗಳನ್ನು ಯುವಕ ಪೊಲೀಸರಿಗೆ ನೀಡಿದ್ದಾನೆ.

ಯುವಕ ನೀಡಿದ ಮಾಹಿತಿಯ ಆಧಾರದ ಮೇಲೆ ತಕ್ಷಣ ಕಾರ್ಯಾಚರಣೆ ನಡೆಸಿದ ಮಂಕಿ ಪೊಲೀಸರು, ಹೊನ್ನಾವರ ಪಟ್ಟಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ಒಂದೇ ಗಂಟೆಯೊಳಗೆ ಆರೋಪಿಗಳನ್ನು ವಶಕ್ಕೆ ಪಡೆದಿರುವುದು ಗಮನಾರ್ಹವಾಗಿದೆ.

ಬಂಧಿತರಿಂದ ಹೆಚ್ಚಿನ ವಿಚಾರಣೆ ಮುಂದುವರಿದಿದ್ದು, ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

 

Please Share: