ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ವಲ್ಕಿ ಪ್ರದೇಶದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರಾದ ಶೇಖ್ ಮಹಮ್ಮದ್ ಜುಬೇರ (58), ರೈತ, ವಲ್ಕಿ ನಿವಾಸಿ, ಅವರು ನೀಡಿದ ದೂರಿನ ಪ್ರಕಾರ, ಮಂಗಳವಾರ ಕೊಳಗದ್ದೆ ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಅಬ್ದುಲ್ ರೆಹಮಾನ್ ಔಟ್ ಆಗಿದ್ದಾನೆ ಎಂದು ಅಂಪೈರ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಕೆಲ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ ಸುಬಾನ್ ಖಾಜಾ ಫಕರ್ದೀನ್ (24) ಹಾಗೂ ಮೇಹದಿ ಖಾಜಾ ಫಕರ್ದೀನ್ (21) ಅಂಪೈರ್ ಜೊತೆ ವಾಗ್ವಾದ ನಡೆಸುತ್ತಿರುವಾಗ, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಜಗಳ ಹೆಚ್ಚಾಗದಂತೆ ತಡೆಯಲು ಮುಂದಾದ ಜುಬೇರ ಅವರು, ಅಂಪೈರ್ ಸರಿಯಾದ ತೀರ್ಪು ನೀಡಿದ್ದಾರೆ ಎಂದು ಹೇಳಿದ್ದಕ್ಕೆ ಆರೋಪಿತರು ಆಕ್ರೋಶಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಾದ ನಂತರ ಸಂಜೆ ಸುಮಾರು 4:45 ರಿಂದ 4:50ರ ನಡುವೆ ಜುಬೇರ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಆರೋಪಿಗಳಲ್ಲಿ ಸುಬಾನ್ ಬ್ಯಾಟ್ನಿಂದ ಜುಬೇರ ಅವರ ತಲೆಗೆ ಹೊಡೆದು ಗಾಯಪಡಿಸಿದರೆ, ಮೇಹದಿ ಮತ್ತೊಂದು ಬ್ಯಾಟ್ನಿಂದ ಬೆನ್ನಿಗೆ ಹೊಡೆದು ನೋವುಂಟುಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆಯಲ್ಲಿ ಹೊನ್ನಾವರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 118(1), 352 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
