ಕರಾವಳಿ ವಾಯ್ಸ್ ನ್ಯೂಸ್ 

ಯಲ್ಲಾಪುರ: ಜೀವ ಮತ್ತು ಮರಣದ ನಡುವಿನ ಸಂಕಟದ ಕ್ಷಣಗಳಲ್ಲಿ ಮಾನವೀಯತೆ ಹೇಗೆ ಜೀವ ಉಳಿಸುತ್ತದೆ ಎಂಬುದಕ್ಕೆ ತಾಲೂಕಿನ ಚವತ್ತಿ ಸಮೀಪ ಗುರುವಾರ ನಡೆದ ಘಟನೆ ಸಾಕ್ಷಿಯಾಗಿದೆ.

Banner Ad

ವಿಜಯಪುರದಿಂದ ಸಿಮೆಂಟ್ ತುಂಬಿಕೊಂಡು ಯಲ್ಲಾಪುರ–ಶಿರಸಿ ಮಾರ್ಗವಾಗಿ ಸಾಗುತ್ತಿದ್ದ ಲಾರಿ, ಚವತ್ತಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಅಂಚಿನಲ್ಲಿ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಚಾಲಕ ಲಾರಿಯ ಅಡಿಯಲ್ಲಿ ಸಿಲುಕಿಕೊಂಡು ನೋವಿನಿಂದ ನರಳುತ್ತಿದ್ದನು.

ಘಟನೆಯನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಸಾರ್ವಜನಿಕರು ಮಾನವೀಯತೆ ಮೆರೆದಂತೆ ರಕ್ಷಣಾ ಕಾರ್ಯಕ್ಕೆ ಮುಂದಾದರು. ಸಮಯದೊಂದಿಗೆ ಪೈಪೋಟಿ ನಡೆಸಿದಂತೆ ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿ, ಲಾರಿಯ ಅಡಿಯಲ್ಲಿ ಸಿಲುಕಿದ್ದ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆದರು.

ಗಂಭೀರವಾಗಿ ಗಾಯಗೊಂಡ ಚಾಲಕನನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಅಪಘಾತದ ಬಗ್ಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

 

Please Share: