ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ, ಏಪ್ರಿಲ್ 30: ಕಾಡುಕೋಣ ಬೇಟೆಯಾಡುತ್ತಿದ್ದ ಸಂಘಟಿತ ಜಾಲವೊಂದನ್ನು ಶಿರಸಿ ವಿಭಾಗದ ಹುಲೆಕಲ್ ವಲಯ ಅರಣ್ಯಾಧಿಕಾರಿಗಳು ಭೇದಿಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೂ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ಬಂಧಿತನನ್ನು ಸೋದೆಪೇಟೆ ನಿವಾಸಿ ಅಬ್ದುಲ್ ಸಲೀಮ್ ಅಬ್ದುಲ್ ರಬ್ಬು ಸಾಬ್ (44) ಎಂದು ಗುರುತಿಸಲಾಗಿದೆ. ಇದೇ ಗ್ರಾಮದ ಹಸನ್ ಮೌಲಾಲಿ ಬೆಣ್ಣೆಸಾಬ, ಹನ್ನಾನ ಅಬ್ದುಲ್ ರಬ್ಬುಸಾಬ, ಸಲಿಂ ಉಸ್ಮಾನಸಾಬ ಹಾಗೂ ಅಬ್ದುಲ್ ಕರಿಂ ಅವರು ಅಧಿಕಾರಿಗಳ ತಂಡ ದಾಳಿ ನಡೆಸುತ್ತಿದ್ದಂತೆಯೇ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಖಚಿತ ಮಾಹಿತಿ ಮೇರೆಗೆ ಹುಲೆಕಲ್ ಅರಣ್ಯ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, ಕಾಡುಕೋಣದ ಮಾಂಸದ ಅವಶೇಷಗಳು, ತುಣುಕುಗಳು ಹಾಗೂ ಸಾಗಣೆಗೆ ಬಳಸಿದ್ದ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಹಿಂದೂರಾವ್ ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಸಿ.ಎನ್ ಅವರ ಮಾರ್ಗದರ್ಶನದಲ್ಲಿ, ಹುಲೆಕಲ್ ವಲಯ ಅರಣ್ಯಾಧಿಕಾರಿ ಶಿವಾನಂದ ಎಸ್. ನಿಂಗಾಣಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ವನ್ಯಜೀವಿ ಹಾನಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.

 

Please Share: