ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಲಾಮಾ ಕ್ಯಾಂಪ್ ನಂ.1ರ ಬೌದ್ಧ ಸನ್ಯಾಸಿಯೊಬ್ಬರ ಶವ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಪತ್ತೆಯಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೃತರನ್ನು ತಶಿ ದುಂಡುಪ್ (38) ಎಂದು ಗುರುತಿಸಲಾಗಿದೆ. ಇವರು ಮುಂಡಗೋಡಿನ ಲಾಮಾ ಕ್ಯಾಂಪ್ ನಂ.1 ನಿವಾಸಿಯಾಗಿದ್ದು, ಬೌದ್ಧ ಸನ್ಯಾಸಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ಧಾರವಾಡ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಕಾಲಿಗೆ ಹಗ್ಗ ಕಟ್ಟಿ ಮುಖ ಭಾಗಕ್ಕೆ ಗಾಯಗಳಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆ ದುಷ್ಕರ್ಮಿಗಳು ಕ್ರೂರವಾಗಿ ಹತ್ಯೆ ನಡೆಸಿರುವ ಸಾಧ್ಯತೆ ವ್ಯಕ್ತವಾಗಿದೆ.

ಮೃತ ಸನ್ಯಾಸಿ ಮಂಗಳವಾರದಿಂದ ಕಾಣೆಯಾಗಿದ್ದರೆಂದು ಮಾಹಿತಿ ಲಭ್ಯವಾಗಿದ್ದು, ಅವರ ಹುಡುಕಾಟ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿದು ಧಾರವಾಡ ಗ್ರಾಮೀಣ ಠಾಣೆಯ ಕ್ರೈಂ ತಂಡ ಮುಂಡಗೋಡಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಮುಂಡಗೋಡ ಪೊಲೀಸರು ಸಹ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಅಹಿಂಸೆಯ ಸಂದೇಶ ಸಾರುವ ಸನ್ಯಾಸಿಯೊಬ್ಬರ ಹತ್ಯೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಹಣದ ವಿಚಾರವೇ ಕಾರಣವೇ ಅಥವಾ ಬೇರೆ ಯಾವುದಾದರೂ ಹಿನ್ನೆಲೆ ಇದೆಯೇ ಎಂಬುದು ಪೊಲೀಸರ ತನಿಖೆಯ ನಂತರವೇ ಸ್ಪಷ್ಟವಾಗಬೇಕಿದೆ.

 

Please Share: