ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೊಟೇಲ್ ನಲ್ಲಿ ರೌಡಿಶೀಟರ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಭೀಕರವಾಗಿ ಹತ್ಯೆಗೈದ ಘಟನೆ ಶುಕ್ರವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ನಡೆದಿದೆ.

ಹತ್ಯೆಗೀಡಾದವರು ಜಮೀರ್ ಅಹ್ಮದ್ ದರ್ಗಾವಾಲೆ (ಎಂಎನ್‌ಡಿ) ಎಂದು ಗುರುತಿಸಲಾಗಿದೆ. ಅವರು ಸ್ನೇಹಿತನೊಂದಿಗೆ ಊಟಕ್ಕೆ ಬಂದಿದ್ದ ವೇಳೆ ನಾಲ್ಕೈದು ಮಂದಿ ದುಷ್ಕರ್ಮಿಗಳು ಹೊಟೇಲ್‌ಗೆ ನುಗ್ಗಿ ಖಾರದ ಪುಡಿ ಎರಚಿ ಗಾಬರಿಗೊಳಿಸಿ, ತಪ್ಪಿಸಿಕೊಳ್ಳಲು ಅಡುಗೆ ಕೋಣೆಯತ್ತ ಓಡಿದ ಅವರನ್ನು ಬೆನ್ನಟ್ಟಿ ಹಿಡಿದು ಮಚ್ಚಿನಿಂದ ಕುತ್ತಿಗೆಗೆ ಇರಿದು ಕೊಲೆಗೈದಿದ್ದಾರೆ.

ಘಟನೆಯಿಂದ ಬೆಚ್ಚಿಬಿದ್ದ ಹೊಟೇಲ್ ಮಾಲೀಕ ತಕ್ಷಣ ಸ್ಥಳದಿಂದ ಓಡಿ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಾಳಿ ನಡೆಸಿದ ಆರೋಪಿಗಳು ಬಳಿಕ ಪರಾರಿಯಾಗಿದ್ದಾರೆ.

ಮೃತ ಜಮೀರ್ ದರ್ಗಾವಾಲೆ ಮೀಟರ್ ಬಡ್ಡಿ ದಂಧೆಯ ಕಿಂಗ್‌ಪಿನ್ ಆಗಿದ್ದನೆಂದು ಹೇಳಲಾಗುತ್ತಿದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಅವರನ್ನು ಅಪಹರಿಸಿ 30 ಲಕ್ಷ ರೂ. ಬೇಡಿಕೆ ಇಟ್ಟ ಪ್ರಕರಣವೂ ನಡೆದಿದ್ದು, ಆ ಪ್ರಕರಣವನ್ನು ಮುಂಡಗೋಡ ಪೊಲೀಸ್ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದರು.

ಪ್ರಸ್ತುತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಭೇಟಿ ನೀಡಿ, ಆರೋಪಿಗಳ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

 

Please Share: