ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಜಾನುವಾರುಗಳ ಮೇಲೆ ಕ್ರೂರತೆ ತೋರಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಾಗೂ ವಧೆಗೆ ಸಿದ್ಧಪಡಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳು ಭಟ್ಕಳದಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರು ದಾಳಿ ನಡೆಸಿ ಒಟ್ಟು 8 ಒಂಟೆಗಳು ಹಾಗೂ 2 ಎತ್ತುಗಳನ್ನು ರಕ್ಷಿಸಿದ ಘಟನೆ ನಡೆದಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ಮೊದಲ ಪ್ರಕರಣದಲ್ಲಿ, ಏಪ್ರಿಲ್ 21 ರಂದು ಬೆಳಿಗ್ಗೆ ಸುಮಾರು 10:00 ಗಂಟೆ ವೇಳೆಗೆ ಶಿರಾಲಿ ಕಡೆಯಿಂದ ಉಳ್ಳಾಲ ಕಡೆಗೆ ಸಾಗುತ್ತಿದ್ದ ಎಸ್.ಎಂ.ಎಲ್ ಕಂಪನಿಯ ಸಾಮ್ರಾಟ್ ಲಾರಿ (MH-09/HD-5448)ಯನ್ನು ತಪಾಸಣೆ ಮಾಡಿದ ವೇಳೆ ಅಕ್ರಮ ಬೆಳಕಿಗೆ ಬಂದಿದೆ. ಲಾರಿಯ ಹಿಂಭಾಗದಲ್ಲಿ ಸುಮಾರು ₹3.75 ಲಕ್ಷ ಮೌಲ್ಯದ 8 ಒಂಟೆಗಳನ್ನು ಅಮಾನುಷವಾಗಿ ಕಟ್ಟಿ, ಅವುಗಳಿಗೆ ನೀರು ಹಾಗೂ ಮೇವು ನೀಡದೇ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಈ ಸಂಬಂಧ ಕರಣ ಬಾಬರ (26, ಮಧ್ಯಪ್ರದೇಶ), ಸುಹಾಸ ಸೂರ್ಯವಂಶಿ (22, ಮಹಾರಾಷ್ಟ್ರ) ಹಾಗೂ ಯಶ ಗೋಟಕಿಂಡೆ (19, ಮಹಾರಾಷ್ಟ್ರ) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಾನುವಾರುಗಳ ಸಾಗಾಟಕ್ಕೆ ಅಗತ್ಯವಾದ ಯಾವುದೇ ಪರವಾನಿಗೆ ಇಲ್ಲದೆ, ಕ್ರೂರ ರೀತಿಯಲ್ಲಿ ಸಾಗಾಟ ಮಾಡಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಭಟ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಂದರ ರೋಡ್ ಪ್ರದೇಶದಲ್ಲಿ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಸಿದ್ಧಪಡಿಸಲಾಗುತ್ತಿದ್ದ ಘಟನೆ ಪತ್ತೆಯಾಗಿದೆ. ಖಚಿತ ಮಾಹಿತಿಯ ಮೇರೆಗೆ ಏಪ್ರಿಲ್ 20 ರಂದು ರಾತ್ರಿ 9:45ಕ್ಕೆ ಪೊಲೀಸರು ದಾಳಿ ನಡೆಸಿದಾಗ, ಸುಮಾರು ₹2 ಲಕ್ಷ ಮೌಲ್ಯದ 2 ಎತ್ತುಗಳನ್ನು ನೀರು, ಮೇವು ನೀಡದೆ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಈ ಪ್ರಕರಣದಲ್ಲಿ ಮೊಹಮ್ಮದ್ ಶಿಯಾಮ್ (ಸುಮಾರು 42 ವರ್ಷ) ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎತ್ತುಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಗಿದೆ.
ಎರಡೂ ಪ್ರಕರಣಗಳಲ್ಲಿಯೂ ಆರೋಪಿತರ ವಿರುದ್ಧ Prevention of Cruelty to Animals Act-1960, ಕರ್ನಾಟಕ ಪಶುವಧೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ-2020 ಸೇರಿದಂತೆ ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಜಾನುವಾರುಗಳ ಮೇಲಿನ ಹಿಂಸಾಚಾರವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
