ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಕೇವಲ ₹500 ಕೂಲಿ ಹಣದ ವಿಚಾರಕ್ಕೆ ಉಂಟಾದ ಜಗಳ ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಶಿರಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ತಾಲೂಕಿನ ಸೋಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಟಗೇರಿ ನಿವಾಸಿ ಮಂಜುನಾಥ ಬಸ್ಯಾ ಚೆನ್ನಯ್ಯ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಇದೇ ಗ್ರಾಮದ ರವೀಶ್ ಗಣಪತಿ ಚೆನ್ನಯ್ಯ ಕೊಲೆಯಾದ ವ್ಯಕ್ತಿ.

ಮೃತ ರವೀಶ್ ಚೆನ್ನಯ್ಯ ಸ್ಥಳೀಯ ಅಡಿಕೆ ತೋಟ ಹಾಗೂ ಗದ್ದೆಗಳಿಗೆ ಕೂಲಿ ಕಾರ್ಮಿಕರನ್ನು ಒದಗಿಸುವ ಶೇರುಗಾರನಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಮಂಜುನಾಥ್ ಕೂಡ ಅವನೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದನು. ಒಂದು ಬಾರಿ ಕೆಲಸ ಮಾಡಿದ ₹500 ಕೂಲಿ ಹಣವನ್ನು ರವೀಶ್ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆ ಇಬ್ಬರ ನಡುವೆ ಪದೇಪದೇ ಜಗಳವಾಗುತ್ತಿತ್ತು.

ಘಟನೆಯ ವಿವರ:

2025ರ ಆಗಸ್ಟ್ 14ರಂದು ರಾತ್ರಿ ಸುಮಾರು 9:40ರ ವೇಳೆಗೆ, ರವೀಶ್ ಆರೋಪಿ ಮಂಜುನಾಥನ ಮನೆಗೆ ಹೋಗಿ “ನಾಳೆ ಕೆಲಸಕ್ಕೆ ಬಾ” ಎಂದು ಕರೆದಿದ್ದಾನೆ. ಆಗ ಮಂಜುನಾಥ್ “ಬಾಕಿ ಇರುವ ₹500 ನೀಡಿದರೆ ಮಾತ್ರ ಬರುತ್ತೇನೆ” ಎಂದು ಹೇಳಿದ್ದಾನೆ. ಅದಕ್ಕೆ ರವೀಶ್ “ಮೂರು-ನಾಲ್ಕು ದಿನಗಳಲ್ಲಿ ಹಣ ಕೊಡುತ್ತೇನೆ” ಎಂದು ಹೇಳಿದ್ದಾನೆ.

ಈ ಮಾತಿಗೆ ಕೋಪಗೊಂಡ ಮಂಜುನಾಥ್, ಮನೆಯಲ್ಲಿದ್ದ ಕಬ್ಬಿಣದ ಹಿಡಿಯುಳ್ಳ ಗುದ್ದಲಿಯನ್ನು ತೆಗೆದುಕೊಂಡು ರವೀಶ್‌ನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ರವೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪೊಲೀಸ್ ಕ್ರಮ:

ಈ ಕುರಿತು ಮೃತನ ಪತ್ನಿ ಚೇತನಾ ರವಿ ಚೆನ್ನಯ್ಯ ನೀಡಿದ ದೂರಿನ ಮೇರೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್‌ಪೆಕ್ಟರ್ ಶಶಿಕಾಂತ್ ವರ್ಮಾ ಅವರು ಭಾರತೀಯ ನ್ಯಾಯ ಸಂಹಿತೆ ಕಲಂ 103(1) ಮತ್ತು 104 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು:

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ್ ಕಿಣಿ ಅವರು, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿ ಮಂಜುನಾಥ್‌ನ್ನು ದೋಷಿ ಎಂದು ತೀರ್ಮಾನಿಸಿದರು. ಪರಿಣಾಮವಾಗಿ ಜೀವಾವಧಿ ಶಿಕ್ಷೆ ಜೊತೆಗೆ ₹25,000 ದಂಡ ವಿಧಿಸಲಾಗಿದೆ.

ಇದಲ್ಲದೆ, ಮೃತನ ಪತ್ನಿಗೆ ₹50,000 ಪರಿಹಾರ ನೀಡಲು ಆದೇಶಿಸಿದ್ದು, ಹೆಚ್ಚುವರಿ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಹಿನ್ನೆಲೆ:

ಆರೋಪಿ ಮಂಜುನಾಥ್ ಈಗಾಗಲೇ 2002ರಲ್ಲಿ ತನ್ನ ಹೆಂಡತಿಯ ತಂದೆಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ 14 ವರ್ಷಗಳ ಶಿಕ್ಷೆ ಅನುಭವಿಸಿ ಹೊರಬಂದಿದ್ದ ಹಳೆಯ ಅಪರಾಧಿಯಾಗಿದ್ದನು.

ಸರ್ಕಾರಿ ಅಭಿಯೋಜಕರು ಪ್ರಕರಣವನ್ನು ಸಮರ್ಥವಾಗಿ ವಾದ ಮಂಡಿಸಿದ್ದು, ಪೊಲೀಸ್ ಸಿಬ್ಬಂದಿ ಸಾಕ್ಷಿದಾರರನ್ನು ಹಾಜರುಪಡಿಸುವಲ್ಲಿ ಸಹಕಾರ ನೀಡಿದ್ದಾರೆ.

 

Please Share: