ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಮಾನವೀಯತೆ ತೋರಿಸಿ ಬೀದಿ ನಾಯಿಗೆ ಅನ್ನ ಹಾಕಿದ ಯುವಕನಿಗೆ ಈಗ ಅದೇ ಕೃತ್ಯವೇ ಸಮಸ್ಯೆಯಾಗಿ ಪರಿಣಮಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೈರಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Banner Ad

ಬೈರಾ ಗ್ರಾಮದ ತುಶಾರ್ ಲೊಳೆಕರ ಅವರು ಸ್ಥಳೀಯ ಬಸ್ ನಿಲ್ದಾಣದ ಬಳಿ ಅನಾರೋಗ್ಯದಿಂದ ಬಳಲುತ್ತಿದ್ದ ಬೀದಿ ನಾಯಿಗೆ ನಿತ್ಯ ಅನ್ನ ಹಾಕುತ್ತಿದ್ದರು. ಆದರೆ ಇತ್ತೀಚೆಗೆ ಆ ಶ್ವಾನದಲ್ಲಿ ಮಾನಸಿಕ ಅಸ್ವಸ್ಥತೆ ಕಾಣಿಸಿಕೊಂಡು ಕೆಲವರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ ಪಂಚಾಯ್ತಿಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆ, ಕೆಲ ದಿನಗಳಿಂದ ನಾಯಿಗೆ ಅನ್ನ ಹಾಕುತ್ತಿದ್ದ ತುಶಾರ್ ಅವರನ್ನೇ ಅದರ ಸಂಪೂರ್ಣ ನಿರ್ವಹಣೆಗೆ ಹೊಣೆಗಾರನನ್ನಾಗಿ ಮಾಡಿರುವ ಪಂಚಾಯ್ತಿ, ಶ್ವಾನದ ಆರೈಕೆ ಹಾಗೂ ನಿಯಂತ್ರಣ ಮಾಡುವಂತೆ ನೋಟಿಸ್ ಜಾರಿ ಮಾಡಿದೆ.

ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ತುಶಾರ್, “ಮಾನವೀಯತೆಗಾಗಿ ಅನ್ನ ಹಾಕಿದ್ದೇ ತಪ್ಪಾಗಿ ಪರಿಗಣಿಸಲಾಗಿದೆ. ಶ್ವಾನದ ಸಂಪೂರ್ಣ ಹೊಣೆಗಾರಿಕೆಯನ್ನು ಒಬ್ಬ ವ್ಯಕ್ತಿಗೆ ಹಾಕುವುದು ನ್ಯಾಯವೇ?” ಎಂದು ಪ್ರಶ್ನಿಸಿ, ಪಂಚಾಯ್ತಿ ಕ್ರಮವನ್ನು ಪ್ರಶ್ನಿಸಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

ಈ ಘಟನೆ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಬೀದಿ ಪ್ರಾಣಿಗಳ ನಿರ್ವಹಣೆ ಸಂಬಂಧ ಅಧಿಕಾರಿಗಳ ಜವಾಬ್ದಾರಿ ಹಾಗೂ ಸಾಮಾನ್ಯ ನಾಗರಿಕರ ಪಾತ್ರ ಕುರಿತು ಪ್ರಶ್ನೆಗಳು ಎದ್ದಿವೆ.

 

Please Share: