ಕರಾವಳಿ ವಾಯ್ಸ್ ನ್ಯೂಸ್ 

ಹೊನ್ನಾವರ: ಪಟ್ಟಣದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿರುವ ಎ.ಆರ್.ಎಮ್ ಸೂಪರ್ ಮಾರ್ಕೆಟ್‌ನಲ್ಲಿ ಮೂರು ದಿನಗಳ ಹಿಂದೆ ನಡೆದ ಕಳ್ಳತನ ಪ್ರಕರಣವನ್ನು ಹೊನ್ನಾವರ ಪೊಲೀಸರು ಕೇವಲ 48 ಗಂಟೆಯೊಳಗೆ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Banner Ad

ಬಂಧಿತ ಆರೋಪಿ ದಾಂಡೇಲಿ ತಾಲೂಕಿನ ಸುಭಾಷನಗರ ನಿವಾಸಿ ಮುಜಾಫರ್ ಶೇಖ್ ಮಹಮ್ಮದ್ ಸಾಬ್ ಶೇಖ್. ಕುಮಟಾದ ಸಿತಾರಾ ಹೋಟೆಲ್ ಎದುರು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಕಳುವಾದ ಸ್ವತ್ತನ್ನು ಸಹ ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರಗಳ ಪ್ರಕಾರ, ಪಟ್ಟಣದ ಎ.ಆರ್.ಎಮ್ ಬಜಾರ್ ಸೂಪರ್ ಮಾರ್ಕೆಟ್‌ನ ಮೊದಲ ಮಹಡಿಯಲ್ಲಿ ಅಳವಡಿಸಲಾಗಿದ್ದ ವಾಲ್ ಗ್ಲಾಸ್ ಅನ್ನು ಒಡೆದು ಒಳನುಗ್ಗಿದ ಆರೋಪಿ, ಕ್ಯಾಶ್ ಕೌಂಟರ್ ಹಾಗೂ ಲಾಕರ್‌ನಲ್ಲಿ ಇಟ್ಟಿದ್ದ ಅಂದಾಜು ₹1,20,000 ನಗದು ಹಾಗೂ ₹25,000 ಮೌಲ್ಯದ ಎನ್.ವಿ.ಆರ್ ವಸ್ತುಗಳನ್ನು ಕಳವು ಮಾಡಿಕೊಂಡಿದ್ದನು. ಅಲ್ಲದೆ, ಸೂಪರ್ ಮಾರ್ಕೆಟ್ ಗೋಡೆಗೆ ಅಳವಡಿಸಲಾಗಿದ್ದ 6 ಅಡಿ ಉದ್ದ ಮತ್ತು 3 ಅಡಿ ಅಗಲದ 12 ಎಂ.ಎಂ. ದಪ್ಪದ ವಾಲ್ ಗ್ಲಾಸ್ ಅನ್ನು ಒಡೆದು ಸುಮಾರು ₹3,000 ನಷ್ಟ ಉಂಟುಮಾಡಿದ್ದನು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆ ಬಳಿಕ ತ್ವರಿತವಾಗಿ ಕಾರ್ಯಪ್ರವೃತ್ತರಾದ ಪೊಲೀಸರು, ಕೇವಲ 48 ಗಂಟೆಯೊಳಗೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಚುರುಕು ಕಾರ್ಯಾಚರಣೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಈ ಕಾರ್ಯಾಚರಣೆ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್‌ಪಿ ಗಿರೀಶ್ ಬಿ.ಪಿ. ಹಾಗೂ ಪಿಐ ಸಿದ್ದರಾಮೇಶ್ವರ ಎಸ್. ಅವರ ಮಾರ್ಗದರ್ಶನದಲ್ಲಿ ನಡೆಯಿತು. ಪಿಎಸ್‌ಐ ಮಹಾಂತೇಶ ವಾಲ್ಮೀಕಿ, ಪಿಎಸ್‌ಐ ಮಂಜುನಾಥ ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಪೊಲೀಸ್ ನಿರೀಕ್ಷಕ ಶ್ರೀ ರಾಘವೇಂದ್ರ ಮತ್ತು ತಂಡ ಕಾರ್ಯಾಚರಣೆ ನಡೆಸಿದರು.

 

 

Please Share: