ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಶೃಂಗೇರಿ ಶಾರಾದಾ ಪೀಠಾಧೀಶ್ವರರಾದ ಶ್ರೀ ಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ವಿಜಯಯಾತ್ರೆಯ ಸುಸಂದರ್ಭದಲ್ಲಿ, ಪುರಾಣ ಪ್ರಸಿದ್ಧ ಶೇಜವಾಡ ಶ್ರೀ ಶೆಜ್ಜೇಶ್ವರ ದೇವಾಲಯದ ಪುನರ್ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ ಹಿನ್ನೆಲೆಯಲ್ಲಿ, ಕಾರವಾರದಲ್ಲಿ ಭವ್ಯ ಗುರುವಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Banner Ad

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರ ನೇತೃತ್ವದಲ್ಲಿ ಏಪ್ರಿಲ್ 15ರಂದು (ಬುಧವಾರ) ಸಂಜೆ 5 ಗಂಟೆಗೆ ಕಾರವಾರದ ಮಾಲಾದೇವಿ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶ್ರೀಗಳನ್ನು ಪೂರ್ಣಕುಂಭ, ವೇದಘೋಷಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿ ಭಕ್ತರಿಗೆ ದರ್ಶನ ನೀಡಿ, ಆಶೀರ್ವಾದಗಳನ್ನು ದಯಪಾಲಿಸಲಿದ್ದಾರೆ ಹಾಗೂ ಆಶೀರ್ವಚನ ಮಾಡಲಿದ್ದಾರೆ.

ಈ ಮಹತ್ವದ ಸಮಾರಂಭದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಂ.ಜಿ. ಉಮಾ ಅವರು ಮುಖ್ಯ ಉಪಸ್ಥಿತರಾಗಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿರಲಿದ್ದಾರೆ.

ಈ ಪವಿತ್ರ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳ ದರ್ಶನ ಮತ್ತು ಆಶೀರ್ವಾದ ಪಡೆಯುವಂತೆ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಸಮಸ್ತ ಭಕ್ತರು ಮತ್ತು ನಾಗರಿಕರಿಗೆ ಮನವಿ ಮಾಡಿದ್ದಾರೆ.

 

Please Share: