ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಐದು ಮಂದಿ ರೌಡಿ ಅಸಾಮಿಗಳನ್ನು ಆರು ತಿಂಗಳ ಅವಧಿಗೆ ಜಿಲ್ಲೆಯ ಹೊರಗೆ ಗಡಿಪಾರು ಮಾಡುವಂತೆ ಆದೇಶ ಹೊರಡಿಸಲಾಗಿದೆ.

ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಭಾಸ್ಕರ್ ಮಹಾದೇವ ನಾಯಕ್ (40), ರಾಜು ಮಹಾದೇವ ನಾಯಕ್ (36), ಕೇಶವ ಋತಿಕ್ ಮಹಾದೇವ ನಾಯಕ್ (27), ಗಣೇಶ್ ಬಾಬು ನಾಯಕ್ (25) ಹಾಗೂ ಗಣೇಶ್ ಚಾಕ್ಲಿ ಜಯಂತ್ ನಾಯಕ್ (23) ಇವರ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರಿಂದ, ಅವರ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ವಹಿಸಿ ರೌಡಿ ಹಾಳೆಗಳನ್ನು ತೆರೆಯಲಾಗಿತ್ತು.

ಆದಾಗ್ಯೂ, ಇವರಲ್ಲಿ ಯಾವುದೇ ಬದಲಾವಣೆ ಕಾಣಿಸದೆ, ಮತ್ತೆ ಮತ್ತೆ ಕಾನೂನುಬಾಹಿರ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದ ಹಿನ್ನೆಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55 (ಎ) ಮತ್ತು (ಬಿ) ಅಡಿಯಲ್ಲಿ ಗಡಿಪಾರು ಕ್ರಮಕ್ಕೆ ಶಿಫಾರಸು ಸಲ್ಲಿಸಿದ್ದು, ಭಟ್ಕಳ ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯವು ಏಪ್ರಿಲ್ 2, 2026ರಂದು ಆದೇಶ ಹೊರಡಿಸಿದೆ.

ಆದೇಶದಂತೆ, ಭಾಸ್ಕರ್ ಮಹಾದೇವ ನಾಯಕ್ ಅವರನ್ನು ಬಾಗಲಕೋಟೆ ಜಿಲ್ಲೆಯ ನವನಗರ ಠಾಣಾ ವ್ಯಾಪ್ತಿಗೆ, ರಾಜು ಮಹಾದೇವ ನಾಯಕ್ ಅವರನ್ನು ಬೀದರ್ ಜಿಲ್ಲೆಯ ನ್ಯೂಟೌನ್ ಠಾಣಾ ವ್ಯಾಪ್ತಿಗೆ, ಕೇಶವ ಋತಿಕ್ ಮಹಾದೇವ ನಾಯಕ್ ಅವರನ್ನು ಗದಗ ಜಿಲ್ಲೆಯ ಬೆಟಗೇರಿ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಹಾಗೆಯೇ ಗಣೇಶ್ ಬಾಬು ನಾಯಕ್ ಅವರನ್ನು ವಿಜಯಪುರ ಜಿಲ್ಲೆಯ ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಗಣೇಶ್ ಚಾಕ್ಲಿ ಜಯಂತ್ ನಾಯಕ್ ಅವರನ್ನು ಕಲಬುರಗಿ ಜಿಲ್ಲೆಯ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ಏಪ್ರಿಲ್ 5 ಮತ್ತು 6ರಂದು ಮುರ್ಡೇಶ್ವರ ಪೊಲೀಸ್ ಠಾಣಾ ಸಿಬ್ಬಂದಿಗಳು ಮೇಲ್ಕಂಡ ಅಸಾಮಿಗಳನ್ನು ಸಂಬಂಧಿತ ಜಿಲ್ಲೆಗಳ ಪೊಲೀಸ್ ಠಾಣಾ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದು, ಆದೇಶವನ್ನು ಜಾರಿಗೆ ತಂದಿದ್ದಾರೆ.

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇಂತಹ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Please Share: