ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಪಡೀತರ ಅಕ್ಕಿಯನ್ನು ಭತ್ತದ ಚೀಲಗಳ ಕೆಳಗೆ ಮರೆಮಾಡಿ ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದು, ಲಕ್ಷಾಂತರ ಮೌಲ್ಯದ ಅಕ್ಕಿ ಚೀಲಗಳನ್ನು ಜಪ್ತಿ ಮಾಡಿದ್ದಾರೆ.
ಆಹಾರ ನಿರೀಕ್ಷಕರಾದ ಮಂಜುನಾಥರೆಡ್ಡಿ ಸಿ. ಹುಚ್ಚಣ್ಣನವರ ಅವರು ನೀಡಿದ ದೂರಿನ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅತ್ಯಾವಶ್ಯಕ ಸರಕುಗಳ ಅಧಿನಿಯಮ, 1955ರ ಕಲಂ 3 ಮತ್ತು 7ರಡಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಮಂಗಳವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ತಾಲೂಕಿನ ಬೆಳಸೆ ಗ್ರಾಮದ ತಳಗದ್ದೆ ಕ್ರಾಸ್ ಬಳಿ ಕಂದು ಬಣ್ಣದ ಟಾಟಾ ಕ್ಯಾಂಟರ್ (ಕೆಎ-22/ಎಎ-7127) ವಾಹನದಲ್ಲಿ ಯಾವುದೇ ಅನುಮತಿ ಇಲ್ಲದೆ ಪಡೀತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಭತ್ತದ ಚೀಲಗಳ ಮಧ್ಯೆ ಹಾಗೂ ಕೆಳಭಾಗದಲ್ಲಿ ಮರೆಮಾಡಲಾಗಿದ್ದ 50 ಕೆ.ಜಿ ತೂಕದ ಒಟ್ಟು 192 ಅಕ್ಕಿ ಚೀಲಗಳು ಪತ್ತೆಯಾಗಿವೆ. ಜಪ್ತಿಗೊಂಡ ಅಕ್ಕಿಯ ಒಟ್ಟು ಮೌಲ್ಯ ಸುಮಾರು ₹3,07,200 ಎಂದು ಅಂದಾಜಿಸಲಾಗಿದೆ.
ಈ ಪ್ರಕರಣದಲ್ಲಿ ರಾಜೇಶ್ ಎಸ್. ಶೆಟ್ಟಿ, ಪ್ರತೀಕ್ ರಾಜೇಶ್ ಶೆಟ್ಟಿ, ವಾಹನ ಮಾಲೀಕ ಹರೀಶ ಪಟಗಾರ, ಚಾಲಕ ನಾರಾಯಣ ಶಂಕರ ಸಾಳಸ್ಕರ ಹಾಗೂ ಹಮಾಲಿ ಜಗದೀಶ ಸುರೇಶ್ ಅವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.
ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಪಡೀತರ ಅಕ್ಕಿಯನ್ನು ಪಂಚನಾಮೆ ಮೂಲಕ ಜಪ್ತಿ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
