ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಂಜಿನಿಯರ್ ವೃತ್ತಿಯ ಯುವಕನನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ಶನಿವಾರ ನಡೆದಿದೆ.
ಅಂಕೋಲಾ ಪೊಲೀಸ್ ಠಾಣೆಯ ಪಿಎಸ್‌ಐ ಗುರುನಾಥ ಹಾದಿಮನಿ ಅವರು ಸರಕಾರ ಪರವಾಗಿ ನೀಡಿದ ದೂರಿನ ಪ್ರಕಾರ, ಶನಿವಾರ ರಂದು ಮಧ್ಯಾಹ್ನ 1.15ರ ಸುಮಾರಿಗೆ ಅಂಕೋಲಾ ಪಟ್ಟಣದ ಹುಲಿದೇವರವಾಡದ ಎ.ಪಿ.ಎಮ್.ಸಿ ಮೈದಾನದಲ್ಲಿ ರಜತ್ ಮಂಜುನಾಥ ನಾಯಕ (24), ವಂದಿಗೆ ನಿವಾಸಿ, ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ.
ಪೊಲೀಸರು ಸ್ಥಳಕ್ಕೆ ತೆರಳಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರ ಬಾಯಿಯಿಂದ ಗಾಂಜಾ ವಾಸನೆ ಬರುತ್ತಿದ್ದು, ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯು ವೃತ್ತಿಯಲ್ಲಿ ಇಂಜಿನಿಯರ್ ಆಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಬಳಿಕ ಆರೋಪಿಯನ್ನು ಅಂಕೋಲಾ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ.
ಈ ಸಂಬಂಧ ರಜತ್ ಮಂಜುನಾಥ ನಾಯಕ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.
