ಕರಾವಳಿ ವಾಯ್ಸ್ ನ್ಯೂಸ್ 

ಪಣಜಿ: ಮಡಗಾಂವ–ಕಾರವಾರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಬಾರ್ಶೆ–ಪಾಡಿ ನಡುವಿನ ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಅಪಘಾತಕ್ಕೀಡಾಗಿ ಸಂಚಾರ ಕೆಲ ಗಂಟೆಗಳ ಕಾಲ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

Banner Ad

ಅಪಘಾತದ ಪರಿಣಾಮವಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳ ದೀರ್ಘ ಸಾಲು ಕಂಡುಬಂದಿತು. ಸುರಕ್ಷತಾ ಕಾರಣಗಳ ಹಿನ್ನೆಲೆಯಲ್ಲಿ ಮಡಗಾಂವ – ಕಾಣಕೋಣ ಮಾರ್ಗದ ಸಂಚಾರವನ್ನು ತಾತ್ಕಾಲಿಕವಾಗಿ ಕಾಣಕೋಣ–ಆಗೊಂದಾ–ಬೇತುಲ್ ಮಾರ್ಗವಾಗಿ ತಿರುಗಿಸಲಾಗಿತ್ತು. ಭಾರೀ ವಾಹನಗಳ ಸಂಚಾರವನ್ನು ಕೆಲಕಾಲ ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ಸಣ್ಣ ವಾಹನಗಳನ್ನು ಪರ್ಯಾಯ ಮಾರ್ಗಗಳಿಗೆ ಸ್ಥಳಾಂತರಿಸಲಾಯಿತು.

ಅಪಘಾತದ ಮಾಹಿತಿ ಲಭ್ಯವಾದ ತಕ್ಷಣ ರಾಜ್ಯ ಸರ್ಕಾರದ ತುರ್ತು ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಯಿತು. ಸಂಬಂಧಿತ ಅಧಿಕಾರಿಗಳು, ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕುಂಡೈ ಪ್ರದೇಶದಿಂದ ಎಲ್‌ಪಿಜಿ ಕಂಪನಿಯ ತಾಂತ್ರಿಕ ಸಿಬ್ಬಂದಿ ಆಗಮಿಸಿ ಸುರಕ್ಷತಾ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡವಾಗಿ ಬಿದ್ದಿದ್ದ ಗ್ಯಾಸ್ ಟ್ಯಾಂಕರ್ ಅನ್ನು ವಿಶೇಷ ಸಾಧನಗಳ ಸಹಾಯದಿಂದ ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ತೆರವುಗೊಳಿಸಲಾಯಿತು. ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಹಂತ ಹಂತವಾಗಿ ಪುನರಾರಂಭಿಸಲಾಯಿತು.

ಅಪಘಾತದಿಂದ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಘಟನೆಯ ನಿಖರ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

 

 

Please Share: