ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ದಕ್ಷಿಣ ಭಾರತದಲ್ಲೇ ಸುಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆ ಮಂಗಳವಾರದಿಂದ ಆರಂಭವಾಗಿದ್ದು, ರಥಯಾತ್ರೆ ಮೂಲಕ ಅದ್ದೂರಿ ಚಾಲನೆಯನ್ನೂ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಬುಧವಾರ ಮಧ್ಯಾಹ್ನದ ಬಳಿಕ ಶಿರಸಿ, ಸಿದ್ದಾಪುರ ಸೇರಿದಂತೆ ಘಟ್ಟದ ಮೇಲಿನ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿತ್ತು. ಪರಿಣಾಮ ಕಾಮಗಾರಿ ಪ್ರಗತಿಯಲ್ಲಿದ್ದ ರಸ್ತೆ ಕೆಸರುಮಯವಾಗಿದ್ದು ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

Banner Ad

ರಸ್ತೆ ಅವ್ಯವಸ್ಥೆಯಿಂದಾಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದು, ಲಘು ವಾಹನಗಳು ಸಂಪೂರ್ಣ ಕೆಸರುಗದ್ದೆಯಂತಾಗಿದ್ದ ರಸ್ತೆಯಲ್ಲಿ ಹಾದು ಹೋಗಲು ಹರಸಾಹಸವನ್ನೇ ಪಟ್ಟಿದ್ದು, ಭಾರೀ ವಾಹನಗಳೂ ಸಹ ಸಂಕಷ್ಟ ಅನುಭವಿಸುವಂತಾಗಿತ್ತು. ಈ ಹಿನ್ನಲೆ ಹೆದ್ದಾರಿ ಕಾಮಗಾರಿ ಅವಾಂತರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ಸಾರ್ವಜನಿಕರು ವಾಹನ ಸವಾರರ ಪರದಾಟದ ವೀಡಿಯೋ ಹಂಚಿಕೊಂಡು ಜನಪ್ರತಿನಿಧಿಗಳು, ಕಾಮಗಾರಿ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಹೀಗೆ ಹರಿದಾಡಿದ ವೀಡಿಯೋದಲ್ಲಿ ಕೆಲವರು ರಸ್ತೆಯ ಸ್ಥಳವನ್ನು ಸೂಕ್ತವಾಗಿ ತಿಳಿಸಿದ್ದು, ಇನ್ನೂ ಕೆಲ ವೀಡಿಯೋದಲ್ಲಿ ಯಾವ ರಸ್ತೆ ಎನ್ನುವ ಮಾಹಿತಿ ಇರಲಿಲ್ಲ. ಹೀಗಾಗಿ ಕುಮಟಾದಿಂದ ಶಿರಸಿ ಮಾರ್ಗವಾಗಿ ಹಾವೇರಿ ವರೆಗೂ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766ಇಇ ಯ ಅಲ್ಲಲ್ಲಿ ಕಾಮಗಾರಿ ಪ್ರಗತಿಯಲ್ಲಿರುವುದು ಗೊಂದಲಕ್ಕೆ ಕಾರಣವಾಗಿದೆ. ಕೆಲವರು ಶಿರಸಿ-ಕುಮಟಾ ಹೆದ್ದಾರಿ ಹದಗೆಟ್ಟಿದೆ ಎಂದು ವೀಡಿಯೋ ಹರಿಬಿಟ್ಟಿದ್ದು, ಅಸಲಿಗೆ ಆ ವೀಡಿಯೋ ಶಿರಸಿ-,ಹಾವೇರಿ ಹೆದ್ದಾರಿಯದ್ದು ಎನ್ನಲಾಗಿದೆ.

ಶಿರಸಿ ತಾಲ್ಲೂಕಿನ ದಾಸನಕೊಪ್ಪ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಸಮ್ಮಸಗಿ ಗ್ರಾಮಗಳ ನಡುವಿನ ಹೆದ್ದಾರಿ ಮಾರ್ಗದಲ್ಲಿ ಗುಡ್ಡದಂತೆ ಎತ್ತರವಿದ್ದ ರಸ್ತೆಯನ್ನು ಅಗೆದು ಎತ್ತರವನ್ನು ಕಡಿಮೆ ಮಾಡಿದ್ದು ಇದೇ ಪ್ರದೇಶವೇ ನಿನ್ನೆ ಸುರಿದ ಅಕಾಲಿಕ ಮಳೆಯಿಂದ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ.

ಶಿರಸಿಯಿಂದ ಬೆಂಗಳೂರಿಗೆ ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡುತ್ತವೆ. ಇದೀಗ ರಸ್ತೆ ಅವ್ಯಸ್ಥೆಯಿಂದಾಗಿ ಜನರು ಪರದಾಡುವಂತಾಗಿದ್ದು, ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರುವಂತೆ ಮಾಡಿದೆ.

 

 

Please Share: