ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಸಿದ್ದರಾಮಯ್ಯ ಅವರು ಫೆಬ್ರವರಿ 22ರಂದು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Banner Ad

ಅಂದು ಬೆಳಿಗ್ಗೆ 11.50ಕ್ಕೆ ಹೆಲಿಕಾಪ್ಟರ್ ಮೂಲಕ ಅಂಕೋಲಾ ತಾಲೂಕಿಗೆ ಆಗಮಿಸುವ ಮುಖ್ಯಮಂತ್ರಿ, ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಈ ಸೇತುವೆ ಅಂಕೋಲಾ ಭಾಗದ ಜನರ ಸಂಚಾರ ಸೌಲಭ್ಯಕ್ಕೆ ಮಹತ್ವದ ಕೊಡುಗೆ ನೀಡಲಿದೆ.

ಬಳಿಕ ಮಧ್ಯಾಹ್ನ 12.45ಕ್ಕೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ಆಸ್ಪತ್ರೆಯಿಂದ ಜಿಲ್ಲೆ ಹಾಗೂ ಸುತ್ತಮುತ್ತಲಿನ ಭಾಗದ ಜನರಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳು ಲಭ್ಯವಾಗಲಿವೆ.

ಇದೇ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಿನ ಖಾನಾಪುರ–ತಾಳಗುಪ್ಪ ರಾಜ್ಯ ಹೆದ್ದಾರಿ-93ರ ಕಿ.ಮೀ 82.50ರಲ್ಲಿ ನಿರ್ಮಿಸಿದ ಸೇತುವೆ, ಯಲ್ಲಾಪುರ ಪಟ್ಟಣದ ಹೊಸ ನಿರೀಕ್ಷಣಾ ಮಂದಿರ ಕಟ್ಟಡ ಹಾಗೂ ಮುಂಡಗೋಡ ತಾಲೂಕಿನ ಹೊಸ ಪ್ರವಾಸಿ ಮಂದಿರ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Please Share: