ಕರಾವಳಿ ವಾಯ್ಸ್ ನ್ಯೂಸ್ 

ಹೊನ್ನಾವರ: ಕಾರು ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿದ್ದ ಹಾಗೂ ಜಿಲ್ಲೆಯ ಹಲವು ಠಾಣೆಗಳಲ್ಲಿ ಮೋಸದ ಪ್ರಕರಣಗಳಲ್ಲಿ ತೊಡಗಿದ್ದ ಶಿರಸಿ ತಾಲೂಕಿನ ರವೀಶ ಹೆಗಡೆ (27) ಅವರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹೊನ್ನಾವರ ಪೊಲೀಸ್ ಠಾಣೆ ಕ್ರೈಂ ನಂ.255/2025ರ ಪ್ರಕಾರ, ಶಿರಸಿ ತಾಲೂಕಿನ ಸೊಂಡ್ಲೆ ಬೈಲು, ಅಜ್ಜಿಬಾಳ ಗ್ರಾಮದ ರವೀಶ ಹೆಗಡೆ, ಈತ ಹೊನ್ನಾವರದ ಹೊಸಾಕುಳಿಯ ಎಚ್.ಆರ್. ಗಣೇಶ್ (ತಂದೆ ರಾಮ ಹೆಗಡೆ) ಅವರಿಗೆ ಕಡಿಮೆ ಬೆಲೆಯಲ್ಲಿ ಕಾರು ಕೊಡಿಸುವುದಾಗಿ ನಂಬಿಕೆ ಮೂಡಿಸಿದ್ದ. ಅದರಂತೆ ಹಂತ ಹಂತವಾಗಿ ಒಟ್ಟು ₹5,55,000 ಹಣವನ್ನು ಪಡೆದುಕೊಂಡಿದ್ದಾನೆ. ಆದರೆ ಹಣ ಪಡೆದ ನಂತರ ಕಾರು ಒದಗಿಸದೆ ಸಂಪರ್ಕ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರು ದಾಖಲಾಗುತ್ತಿದ್ದಂತೆ ಆರೋಪಿಯ ಶೋಧ ಕಾರ್ಯಾಚರಣೆ ಆರಂಭಿಸಿದ ಹೊನ್ನಾವರ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯು ಬೆಂಗಳೂರಿನಲ್ಲಿ ಅಡಗಿ ಇರುವುದನ್ನು ಪತ್ತೆ ಹಚ್ಚಿದರು. ಬಳಿಕ ವಿಶೇಷ ತಂಡ ಬೆಂಗಳೂರಿಗೆ ತೆರಳಿ ಆರೋಪಿ ರವೀಶ ಹೆಗಡೆಯನ್ನು ಬಂಧಿಸಿ ಹೊನ್ನಾವರಿಗೆ ಕರೆತಂದಿದೆ.

ತನಿಖೆ ವೇಳೆ ಆರೋಪಿಯ ವಿರುದ್ಧ ಕಾರವಾರ ಜಿಲ್ಲೆಯಲ್ಲಿ ಒಟ್ಟು 9 ಮೋಸದ ಪ್ರಕರಣಗಳು ಹಾಗೂ ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿರುವುದು ಬಹಿರಂಗವಾಗಿದೆ. ಕಾರು ವ್ಯವಹಾರ ಹಾಗೂ ಹಣಕಾಸು ಹೂಡಿಕೆ ಹೆಸರಿನಲ್ಲಿ ಜನರನ್ನು ನಂಬಿಸಿ ಹಣ ಪಡೆದು ವಂಚನೆ ಮಾಡುವುದು ಆರೋಪಿಯ ಚಟುವಟಿಕೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ಹೊನ್ನಾವರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಆರೋಪಿಯ ವಿರುದ್ಧ ಇನ್ನೂ ಕೆಲವು ಪ್ರಕರಣಗಳ ಸಂಪರ್ಕ ಇರುವ ಸಾಧ್ಯತೆಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕಾರು ಖರೀದಿ-ಮಾರಾಟ ವ್ಯವಹಾರಗಳಲ್ಲಿ ಮೋಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

 

 

 

 

Please Share: