ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಹಾರವಾಡ–ಕಾರವಾರ ಮಾರ್ಗದ ಸರ್ಕಾರಿ ಬಸ್ ಈಗ ಕೇವಲ ಸಾರಿಗೆ ಸಾಧನವಲ್ಲ, ಅದು ವಿದ್ಯಾರ್ಥಿಗಳ ಸಹನೆ ಪರೀಕ್ಷಿಸುವ ವಿಶೇಷ “ಟೆಸ್ಟ್ ವಾಹನ”ವಾಗಿದೆ. ನಿಗದಿತ ಸಮಯಕ್ಕೆ ಕಾಲೇಜು ತಲುಪಿಸುವ ಜವಾಬ್ದಾರಿಗಿಂತ, ದಾರಿಮಧ್ಯೆ ನಿಂತು “ಇಂದು ಓದೋದೇ ಬೇಡ” ಎನ್ನುವ ಸಂದೇಶ ನೀಡುವುದಲ್ಲೇ ಈ ಬಸ್‌ಗೆ ವಿಶೇಷ ಆಸಕ್ತಿ.
ಪ್ರತಿದಿನ ಬೆಳಿಗ್ಗೆ 9.30ಕ್ಕೆ ಕಾರವಾರ ತಲುಪಬೇಕಾದ ಬಸ್, “ಇಂದು ತಲುಪುತ್ತೇನೆ… ನಾಳೆ ನೋಡೋಣ” ಎಂಬ ಧೋರಣೆಯಲ್ಲಿ ಸಂಚಾರ ನಡೆಸುತ್ತಿದೆ. ಬುಧವಾರ ಕೆಟ್ಟು ನಿಂತ ಬಸ್‌ನ್ನು ಗುರುವಾರ ಮತ್ತೆ ಅದೇ ಆತ್ಮವಿಶ್ವಾಸದೊಂದಿಗೆ ರಸ್ತೆಗಿಳಿಸಲಾಗಿದ್ದು, ಇದರಿಂದ ಬಸ್‌ಗೆ ಅಲ್ಲ, ವಿದ್ಯಾರ್ಥಿಗಳಿಗೆ ಮಾತ್ರ ಅಟೆಂಡೆನ್ಸ್ ಶಾರ್ಟೆಜ್ ಎಂಬ ಭಯ ಉಂಟಾಗಿದೆ.
ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ತರಗತಿಗೆ ತಲುಪದೇ, ಪರೀಕ್ಷೆಗೂ ಮೊದಲು ಅಟೆಂಡೆನ್ಸ್ ಲೆಕ್ಕಾಚಾರದಲ್ಲೇ ತಲೆಕೆಡಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. “ಪಾಠ ಕೇಳೋದು ಬೇಡ, ಬಸ್ ಎಲ್ಲಿ ಕೆಡುತ್ತದೋ ನೋಡೋದೇ ಸಾಕು” ಎಂಬ ಹೊಸ ಪಠ್ಯಕ್ರಮವೇ ಜಾರಿಯಲ್ಲಿರುವಂತೆ ಕಾಣುತ್ತಿದೆ.
ಬಸ್ ಕೆಲವೊಮ್ಮೆ ಬರುತ್ತದೆ, ಕೆಲವೊಮ್ಮೆ ಮಧ್ಯದಲ್ಲೇ ಹಠಾತ್ ವಿಶ್ರಾಂತಿ ಪಡೆಯುತ್ತದೆ. ಇದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ತಲುಪುವ ಬದಲು ರಸ್ತೆ ಬದಿಯಲ್ಲಿ ನಿಂತು ಸಾರಿಗೆ ವ್ಯವಸ್ಥೆಯ ತಾತ್ವಿಕ ಅರ್ಥವನ್ನು ಚಿಂತಿಸುವ ಪರಿಸ್ಥಿತಿ ಎದುರಾಗಿದೆ.
ಈ ಅವ್ಯವಸ್ಥೆಯಿಂದ ಬೇಸತ್ತ ವಿದ್ಯಾರ್ಥಿಗಳು ಗುರುವಾರ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ, “ಕೆಟ್ಟ ಬಸ್ ಬೇಡ, ಕನಿಷ್ಠ ಓಡುವ ಬಸ್ ಕೊಡಿ” ಎಂಬ ಸರಳ ಬೇಡಿಕೆಯನ್ನು ಮುಂದಿಟ್ಟರು. ಪ್ರತಿಭಟನೆ ವೇಳೆ ಸಾರಿಗೆ ಸಿಬ್ಬಂದಿಗೂ ಸಾರ್ವಜನಿಕರಿಂದ ತಕ್ಕಷ್ಟು “ಕ್ಲಾಸ್” ಸಿಕ್ಕಿತು.
ವಿದ್ಯಾರ್ಥಿಗಳ ಆಕ್ರೋಶಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹಿನಿ ಗೌಡ, ಉಪಾಧ್ಯಕ್ಷ ಸಂತೋಷ ದುರ್ಗೆಕರ ಹಾಗೂ ಮಾಜಿ ಅಧ್ಯಕ್ಷ ಮಂಜುನಾಥ ಟಾಕೆಕರ ಅವರು, ಪಂಚಾಯತ ಅಧಿಕಾರಿಗಳೊಂದಿಗೆ ಸೇರಿ “ಸಮಸ್ಯೆಯನ್ನು ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ” ಎಂಬ ಭರವಸೆ ನೀಡಿದರು. ಆದರೆ, ಬಸ್ ಯಾವಾಗ ಸರಿಯಾಗುತ್ತದೆ ಎಂಬ ಪ್ರಶ್ನೆಗೆ ಮಾತ್ರ ಬಸ್‌ನಂತೆ ಉತ್ತರವೇ ನಿಂತುಹೋಯಿತು.
ಒಟ್ಟಿನಲ್ಲಿ, ಹಾರವಾಡ–ಕಾರವಾರ ಬಸ್ ಈಗ ವಿದ್ಯಾರ್ಥಿಗಳನ್ನ ಕಾಲೇಜಿಗೆ ಕರೆದೊಯ್ಯುವ ವಾಹನವಾಗದೆ, ಅವರ ಅಟೆಂಡೆನ್ಸ್‌ನ್ನು ಕಡಿಮೆ ಮಾಡುವ “ಸರ್ಕಾರಿ ಸೇವೆ”ಯಾಗಿ ಪರಿಣಮಿಸಿದೆ ಎಂಬುದೇ ವಿದ್ಯಾರ್ಥಿಗಳ ವ್ಯಂಗ್ಯ.
