ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ತಾಲೂಕಿನ ಬಗ್ಗೋಣ ಗ್ರಾಮದ ಭಟ್ಟರ ಬೆಟ್ಟ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಮೃತರನ್ನು ಬಗ್ಗೋಣ ಇಪ್ಪಡಿ ನಿವಾಸಿ ಮಂಜು ನಾರಾಯಣ ಮುಕ್ರಿ ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಅವರು, ಕಳೆದ ಎಂಟು ವರ್ಷಗಳಿಂದ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಎಂಟು ತಿಂಗಳ ಹಿಂದೆ ಆರೋಗ್ಯ ಸಮಸ್ಯೆ ಗಂಭೀರಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಚಿಕಿತ್ಸೆ ವೇಳೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಹಾಗೂ ಕಿಡ್ನಿ ಸಂಬಂಧಿತ ಸಮಸ್ಯೆಗಳಿರುವುದು ಪತ್ತೆಯಾಗಿತ್ತು. ವೈದ್ಯರು ಔಷಧಿ ನೀಡಿ ಮನೆಗೆ ಕಳುಹಿಸಿದ್ದರು. ಆದರೆ ತಲೆಯಲ್ಲಿನ ಸಮಸ್ಯೆ ತೀವ್ರಗೊಂಡ ಬಳಿಕ ಮಾತನಾಡಲು ತೊಂದರೆ ಉಂಟಾಗಿದ್ದು, ಅನಾರೋಗ್ಯದ ಕಾರಣ ಮಾನಸಿಕವಾಗಿ ಕುಗ್ಗಿದ್ದರೆಂದು ತಿಳಿದುಬಂದಿದೆ.
ಫೆಬ್ರವರಿ 2ರಂದು ಮಂಜು ಮುಕ್ರಿ ಅವರು ಬಗ್ಗೋಣ ಗ್ರಾಮದ ಉದಯ ಪಂಡೀತ ಅವರಿಗೆ ಸೇರಿದ ಬೆಟ್ಟ ಪ್ರದೇಶಕ್ಕೆ ತೆರಳಿ ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮೃತರ ತಂಗಿ ಸುಧಾ ರಾಜು ಮುಕ್ರಿ ಅವರು ಕುಮಟಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
