ಕರಾವಳಿ ವಾಯ್ಸ್ ನ್ಯೂಸ್

ಕುಮಟಾ: ಅಂತರ್ ಜಿಲ್ಲಾ ಮಟ್ಟದಲ್ಲಿ ಮನೆ ಕಳ್ಳತನ, ಬ್ಯಾಂಕ್ ಫೈನಾನ್ಸ್, ವಾಹನ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಕುಮಟಾ ಪೊಲೀಸರು ಕೇವಲ 24 ಗಂಟೆಗಳೊಳಗೆ ಬಂಧಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಬಂಧಿತನನ್ನು ದಾಂಡೇಲಿ ನಿವಾಸಿ ಮುಜಾಫರ್ ಮಹಮ್ಮದ್ ಸಾಬ ಶೇಖ್ (27) ಎಂದು ಗುರುತಿಸಲಾಗಿದೆ. ಈತ ಈಗಾಗಲೇ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 11ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.

ಫೆಬ್ರವರಿ 26ರ ಮದ್ಯರಾತ್ರಿ, ಕುಮಟಾ ಪಟ್ಟಣದ ಸುಲಭ ಸೌಹಾರ್ದ ಸಹಕಾರಿ ಸಂಘಕ್ಕೆ ನುಗ್ಗಿದ ಆರೋಪಿ, ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿ ಕೆ.ಡಿ.ಸಿ.ಸಿ ಹಾಗೂ ಹೆಚ್.ಡಿ.ಎಫ್.ಸಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಚೆಕ್‌ಗಳನ್ನು ಕಳ್ಳತನ ಮಾಡಿದ್ದ. ಜೊತೆಗೆ ಸಂಘಕ್ಕೆ ಅಳವಡಿಸಿದ್ದ ಸಿ.ಸಿ.ಟಿ.ವಿ ಡಿವಿಆರ್ ವ್ಯವಸ್ಥೆಯನ್ನೂ ಕದ್ದೊಯ್ದಿದ್ದಾನೆ.

ಇದೇ ವೇಳೆ, ಸುಮಾರು 40 ಸಾವಿರ ರೂ. ಮೌಲ್ಯದ ಹೀರೋ ಮಾಯೆಸ್ಟ್ರೋ ಸ್ಕೂಟರ್ ಕಳ್ಳತನ ಪ್ರಕರಣದಲ್ಲಿಯೂ ಈತನ ಕೈವಾಡ ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಕುಮಟಾ ಪೊಲೀಸರು, ಪಿಐ ಯೋಗೇಶ್ ಕೆ.ಎಂ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದರು. ತನಿಖಾಧಿಕಾರಿ ಸಾವಿತ್ರಿ ನಾಯಕ ಅವರ ಮುಂದಾಳತ್ವದಲ್ಲಿ, ಪೊಲೀಸ್ ಸಿಬ್ಬಂದಿಗಳ ಸಮರ್ಪಕ ಕಾರ್ಯಾಚರಣೆಯಿಂದ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಲಾಯಿತು.

ಈ ವೇಗದ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ ದೀಪನ್ ಅವರು ಕುಮಟಾ ಪೊಲೀಸರನ್ನು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪರಾಧಗಳನ್ನು ತಡೆಗಟ್ಟುವಲ್ಲಿ ಹಾಗೂ ಸಾರ್ವಜನಿಕರಲ್ಲಿ ಭದ್ರತೆ ಭಾವನೆ ಮೂಡಿಸುವಲ್ಲಿ ಈ ಬಂಧನ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ಕುಮಟಾ ಪೊಲೀಸ್ ಇಲಾಖೆಯ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂದೇಶವನ್ನು ನೀಡಿದೆ.

 

Please Share: