ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ರಾಮನಗರ–ಗೋವಾ ರಾಷ್ಟ್ರೀಯ ಹೆದ್ದಾರಿಯ ಅನಮೋಡ ಘಾಟ್ ಪ್ರದೇಶದಲ್ಲಿ ಭೀಕರ ದ್ವಿಚಕ್ರ ವಾಹನ ಅಪಘಾತ ಸಂಭವಿಸಿ, ಯುವಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ಗಾಯಗೊಂಡ ಘಟನೆ ರವಿವಾರ ರಾತ್ರಿ ನಡೆದಿದೆ.
ರವಿವಾರ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಅನಮೋಡ ಘಾಟ್‌ನ ಆರ್‌ಟಿಒ ಚೆಕ್‌ಪೋಸ್ಟ್ ಸಮೀಪ ದ್ವಿಚಕ್ರ ವಾಹನವು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ತಾಲೂಕಿನ ಕುರುವೈ ಮೂಲದ ಸಚಿನ್ ಸಾವರ್ಡೆಕರ್ (25) ಮೃತಪಟ್ಟು, ಸೋನಾರ್ವಾಡಿ ನಿವಾಸಿ ಅಮರ್ ಠಾಕೂರ್ ಗಾಯಗೊಂಡಿದ್ದಾರೆ.
ಸಚಿನ್ ಸಾವರ್ಡೆಕರ್ ಹಾಗೂ ಅಮರ್ ಠಾಕೂರ್ ದ್ವಿಚಕ್ರ ವಾಹನದಲ್ಲಿ ಗೋವಾ ಕಡೆಗೆ ತೆರಳುತ್ತಿದ್ದ ವೇಳೆ, ಅನಮೋಡ ಘಾಟ್‌ನ ತಿರುವು ಪ್ರದೇಶದಲ್ಲಿ ವಾಹನ ಸಮತೋಲನ ತಪ್ಪಿ ನೇರವಾಗಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡರು.
ಅಪಘಾತದ ಬಳಿಕ ಸ್ಥಳೀಯರು ಹಾಗೂ ಪ್ರಯಾಣಿಕರು ಗಾಯಾಳುಗಳನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ರಾಮನಗರ ಆಸ್ಪತ್ರೆಗೆ ದಾಖಲಿಸಿದರು. ಸಚಿನ್ ಸಾವರ್ಡೆಕರ್ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ಬೆಳಗಾವಿಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಗಾಯಾಳು ಅಮರ್ ಠಾಕೂರ್ ಅವರನ್ನು ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಮೃತ ಸಚಿನ್ ಸಾವರ್ಡೆಕರ್ ಗೋವಾದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಗಾಯಗೊಂಡ ಅಮರ್ ಠಾಕೂರ್ ಸ್ವಂತ ವ್ಯವಹಾರ ನಡೆಸುತ್ತಿರುವ ಉದ್ಯಮಿಯಾಗಿದ್ದಾರೆ.
ಘಟನೆಯ ಕುರಿತು ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರೆಸಿದ್ದಾರೆ.
