ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ/ಮಂಗಳೂರು: ₹500 ಮುಖಬೆಲೆಯ ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಭೇದಿಸಿದ್ದು, ಬೆಳ್ತಂಗಡಿ ತಾಲೂಕಿನ ಮನೆಯೊಂದರ ಮೇಲೆ ದಾಳಿ ನಡೆಸಿ ಹಳಿಯಾಳದ ವ್ಯಕ್ತಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ್ ಪುಂಡಲೀಕ ಶೋಲಂಬಿ (30), ಪುತ್ತೂರು ತಾಲೂಕಿನ ಇಬ್ರಾಹಿಂ (60), ಕೇರಳದ ಕಾಸರಗೋಡು ಜಿಲ್ಲೆಯ ಶರೀಫ್ (51) ಹಾಗೂ ಮೊಹಮ್ಮದ್ ನಬಾಸ್ (37), ಪುತ್ತೂರು ತಾಲೂಕಿನ ಸಲ್ಮಾನ್ ಫಾರಿಸ್ (25), ಬೆಳ್ತಂಗಡಿ ತಾಲೂಕಿನ ಸಿರಾಜುದ್ದೀನ್ (34) ಮತ್ತು ಇರ್ಷಾದ್ (31) ಎಂದು ಗುರುತಿಸಲಾಗಿದೆ.

ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಮಾಹಿತಿ ನೀಡಿದ್ದು, ಗುಪ್ತ ಮಾಹಿತಿಯ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ ಸುತೇಶ್ ಕೆ.ಪಿ. ನೇತೃತ್ವದ ತಂಡವು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಆಡೆಂಜದಲ್ಲಿರುವ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ.

ದಾಳಿಯ ವೇಳೆ ₹500 ನೋಟುಗಳಂತೆ ಕಾಣುವ ಎ4 ಗಾತ್ರದ 21 ಮುದ್ರಿತ ಹಾಳೆಗಳು, ಒಂದು ₹500 ನೋಟು, ಕಂಪ್ಯೂಟರ್, ಫೋಟೋಕಾಪಿಯರ್, ನಕಲಿ ನೋಟು ತಯಾರಿಕೆಗೆ ಬಳಸುತ್ತಿದ್ದ ಸೀಲುಗಳು, ಸೆಕ್ಯುರಿಟಿ ಥ್ರೆಡ್ ಹಾಗೂ ಹಾಳೆ ಕತ್ತರಿಸುವ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿಗಳು ಕಳೆದ ಒಂದು ತಿಂಗಳ ಹಿಂದೆ ಬಾಡಿಗೆಗೆ ಮನೆ ಪಡೆದು ಅಲ್ಲಿಯೇ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ಆದರೆ, ಈವರೆಗೆ ಆ ನೋಟುಗಳನ್ನು ಸಾರ್ವಜನಿಕ ಚಲಾವಣೆಗೆ ತಂದಿರುವುದು ಪತ್ತೆಯಾಗಿಲ್ಲ ಎಂದು ಎಸ್‌ಪಿ ಕೆ. ಅರುಣ್ ತಿಳಿಸಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಜಿಲ್ಲಾ ವಿಶೇಷ ಪೊಲೀಸ್ ಘಟಕದ ಇನ್‌ಸ್ಪೆಕ್ಟರ್ ನಂದಕುಮಾರ್, ಎಎಸ್‌ಐ ದೀಪಕ್, ಹೆಡ್ ಕಾನ್ಸ್‌ಟೇಬಲ್‌ಗಳಾದ ಸತೀಶ್ ಹಾಗೂ ರೌಫ್ ಅವರ ತಂಡದ ಜೊತೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಆರ್.ಎನ್. ನೇತೃತ್ವದ ತಂಡವೂ ಸಹಕಾರ ನೀಡಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

 

Please Share: