ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಕಾರವಾರ, ಭಟ್ಕಳ ಮತ್ತು ಅಂಕೋಲಾ ತಾಲ್ಲೂಕುಗಳ ಮಧ್ಯಲಿಂಗಡ್, ದೇವಗಡ, ಹಾಗ್, ಮೊಂಗೆರಗುಡ್ಡ, ಕಿರಿಕುಂದ, ಅಂಕನಿ ಚೆಗ್ಗುಡು ಹಾಗೂ ಕುರುಮಗಡ ಸೇರಿದಂತೆ ಏಳು ದ್ವೀಪಗಳ ಒಟ್ಟು 59 ಎಕರೆ 31 ಗುಂಟೆ ಪ್ರದೇಶವನ್ನು ₹307.71 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಒಪ್ಪಿಗೆ ನೀಡಲಾಗಿದೆ. ಇದರಿಂದ ₹145.87 ಕೋಟಿ ಆದಾಯ ಹಂಚಿಕೆ ಹಾಗೂ ವಾರ್ಷಿಕ ₹8.70 ಕೋಟಿ ಗುತ್ತಿಗೆ ಶುಲ್ಕ ನಿರೀಕ್ಷಿಸಲಾಗಿದ್ದು, ಗುತ್ತಿಗೆ ಶುಲ್ಕದಲ್ಲಿ ಪ್ರತಿ ವರ್ಷ ಶೇ.5ರಷ್ಟು ಹೆಚ್ಚಳವಾಗಲಿದೆ.
ಕರಾವಳಿ ಪ್ರದೇಶಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕರಾವಳಿ ವಲಯ ನಿರ್ವಹಣಾ ಯೋಜನೆ (CZMP)-2019 ಅನ್ನು ನಿಯಮಾನುಸಾರ ಪರಿಷ್ಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ನಕ್ಷೆಗಳು ಹಾಗೂ ವಾಸ್ತವ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ ಎಂಬ ಮೀನುಗಾರರು, ಪ್ರವಾಸೋದ್ಯಮದ ಭಾಗೀದಾರರು, ಭೂಮಾಲೀಕರು, ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾಡಳಿತಗಳ ಮನವಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ವೆಚ್ಚವನ್ನು ₹98.24 ಕೋಟಿಯಿಂದ ₹250.05 ಕೋಟಿಗೆ ಹೆಚ್ಚಿಸಲು ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರಸ್ತುತ 2,000 ಮೀಟರ್ ರನ್‌ವೇಯನ್ನು A-320 ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ 3,250 ಮೀಟರ್‌ಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಭೂಸ್ವಾಧೀನ, ಪುನರ್ವಸತಿ, ಸಂಪರ್ಕ ರಸ್ತೆ ಹಾಗೂ ಸಿವಿಲ್ ಎನ್‌ಕ್ಲೇವ್ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹೆಚ್ಚುವರಿ ವೆಚ್ಚ ಬಳಸಲಾಗುತ್ತದೆ. ಈಗಾಗಲೇ 93 ಎಕರೆ 22 ಗುಂಟೆ ಜಮೀನು ಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕದ ಕರಾವಳಿ ಪ್ರದೇಶದ ಮೀನುಗಾರಿಕಾ ಆರ್ಥಿಕ ಚಟುವಟಿಕೆ ವಿಸ್ತರಣೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಕರಾವಳಿಯನ್ನು ವಿಶೇಷ ಸಮುದ್ರ ವಲಯ (SMZ) ಎಂದು ಅಧಿಸೂಚಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಮುಲ್ಕಿ ತಾಲ್ಲೂಕಿನ ಬಳ್ಕುಂಜೆಯಲ್ಲಿ 150 ಎಕರೆ ಪ್ರದೇಶದಲ್ಲಿ ₹30 ಕೋಟಿ ವೆಚ್ಚದಲ್ಲಿ ವಿಶೇಷ ಸಂಸ್ಕರಣಾ ವಲಯ (SPZ) ಸ್ಥಾಪಿಸಲು ನಿರ್ಧರಿಸಲಾಗಿದೆ. ಕರಾವಳಿ ಜಿಲ್ಲೆಗಳ ಮೀನುಗಾರಿಕೆ ಕೊಂಡಿ ರಸ್ತೆಗಳ ನಿರ್ವಹಣೆಗೆ ₹20 ಕೋಟಿ ಆಡಳಿತಾತ್ಮಕ ಅನುಮೋದನೆಯೂ ನೀಡಲಾಗಿದೆ.
ಉತ್ತರ ಕನ್ನಡದ ಮಂಕಿ ಬಂದರಿನಲ್ಲಿ ₹6,925 ಕೋಟಿ ವೆಚ್ಚದಲ್ಲಿ ಬಹುಉಪಯೋಗಿ ಬಂದರು ಹಾಗೂ ಹಡಗು ನಿರ್ಮಾಣ ಕೇಂದ್ರ ಅಭಿವೃದ್ಧಿಗೆ ಪಿಪಿಪಿ ಮಾದರಿಯಲ್ಲಿ ಅನುಮೋದನೆ ನೀಡಲಾಗಿದೆ. 15 MTPA ಸಾಮರ್ಥ್ಯದ ಈ ಯೋಜನೆಯಿಂದ ₹2,902.69 ಕೋಟಿ ಖಚಿತ ಆದಾಯ ನಿರೀಕ್ಷಿಸಲಾಗಿದ್ದು, ರಾಜ್ಯದ ಆರ್ಥಿಕತೆಗೆ ₹28,000 ಕೋಟಿ ಉತ್ತೇಜನ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 44,800 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಅರಣ್ಯ ಇಲಾಖೆಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಹಲಸರು, ಸಿದ್ದಿ, ಕುಡಿಯ, ಬೆಟ್ಟಕುರುಬ ಹಾಗೂ ಪಣಿಯನ್ ಸೇರಿದಂತೆ ಸ್ಥಳೀಯ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡಗಳಿಗೆ ಅರಣ್ಯ ರಕ್ಷಕ ಮತ್ತು ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಯಲ್ಲಿ ವಿಶೇಷ ಪ್ರಾತಿನಿಧ್ಯ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.
ಇದಲ್ಲದೆ, ರಾಜ್ಯದ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿ ಯೋಜನೆಯಡಿ ದಕ್ಷಿಣ ಕನ್ನಡದ 20, ಉಡುಪಿಯ 12 ಹಾಗೂ ಉತ್ತರ ಕನ್ನಡದ 17 ಶಾಲೆಗಳು ಸೇರಿದಂತೆ ಒಟ್ಟು 49 ಶಾಲೆಗಳನ್ನು ₹245 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಜಿಲ್ಲಾಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.



