ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಅವರ್ಸಾ ಗ್ರಾಮದ ಶ್ರೀ ಕಾತ್ಯಾಯನಿ ಪ್ರೌಢಶಾಲೆಗೆ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಲಿಮಿಟೆಡ್, ದಾಂಡೇಲಿ ಸಂಸ್ಥೆಯ ಸಿಎಸ್ಆರ್ ನಿಧಿಯಡಿ ಸುಮಾರು ₹4 ಲಕ್ಷ ಮೌಲ್ಯದ 50 ಸ್ಟೀಲ್ ಡೆಸ್ಕ್ಗಳನ್ನು ವಿತರಿಸಲಾಯಿತು.
ಸೆ.11ರಂದು ನಡೆದ ಕಾರ್ಯಕ್ರಮದಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಲಿಮಿಟೆಡ್ನ ಆಡಳಿತಾಧಿಕಾರಿಗಳಾದ ರಾಘವೇಂದ್ರ ಜಿ.ಆರ್. ಹಾಗೂ ರಾಜೇಶ್ ತಿವಾರಿ ಅವರು ಡೆಸ್ಕ್ಗಳನ್ನು ಶಾಲೆಗೆ ಹಸ್ತಾಂತರಿಸಿದರು. ಶಾಲೆಯಲ್ಲಿ 212 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ಅನುಕೂಲವಾಗುವಂತೆ ಡೆಸ್ಕ್ಗಳನ್ನು ನೀಡಿರುವುದು ಸಂತಸ ತಂದಿದೆ ಎಂದು ರಾಘವೇಂದ್ರ ಜಿ.ಆರ್. ಹೇಳಿದರು.

ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಹಟ್ಟಿಕೇರಿ ಗ್ರಾಮದ ಮೂಲ ನಿವಾಸಿಯಾಗಿರುವ, ಪ್ರಸ್ತುತ ದಾಂಡೇಲಿಯಲ್ಲಿ ವಾಸವಾಗಿರುವ ಆರ್.ಪಿ. ನಾಯ್ಕ ಅವರ ಪ್ರಯತ್ನದಿಂದ ಡೆಸ್ಕ್ಗಳನ್ನು ಶಾಲೆಗೆ ಒದಗಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಆರ್.ಪಿ. ನಾಯ್ಕ ಮಾತನಾಡಿ, ಶಾಲೆಯ ಅಮೃತ ಮಹೋತ್ಸವ ಸಮಾರಂಭಕ್ಕೂ ಮುನ್ನವೇ ಡೆಸ್ಕ್ಗಳನ್ನು ಕೊಡಿಸಲು ಪ್ರಯತ್ನಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಡೆಸ್ಕ್ಗಳನ್ನು ನೀಡಿರುವ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಆಡಳಿತ ಮಂಡಳಿಯ ಸಹಕಾರವನ್ನು ಸ್ಮರಿಸಿದರು.
ನಿವೃತ್ತ ಮುಖ್ಯಾಧ್ಯಾಪಕರಾದ ಎಂ.ಎಸ್. ಪ್ರಭು, ಡಿ.ಆರ್. ಹಿಚ್ಗಡ ಹಾಗೂ ಸಂಸ್ಥೆಯ ಅಧ್ಯಕ್ಷ ಎನ್.ವಿ. ರೇವಣಕರ ಅವರ ಮಾರ್ಗದರ್ಶನದಲ್ಲಿ ಶಾಲೆಯಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಎನ್.ವಿ. ರೇವಣಕರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧ್ಯಾಪಕ ಗಂಗಾಧರ್ ಸಿ. ನಾಯ್ಕ ಸ್ವಾಗತಿಸಿದರು. ಎಂ.ಜಿ. ನಾವಡ ವಂದಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಉಲ್ಲಾಸ್ ರೇವಣಕರ, ನಿವೃತ್ತ ಮುಖ್ಯಾಧ್ಯಾಪಕ ಡಿ.ಆರ್. ಹಿಚ್ಗಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತುಳಸಿದಾಸ್ ಕಾಮತ್, ಪ್ರಸಾದ್ ಪಟೇಲ್, ವೆಸ್ಟ್ ಕೋಸ್ಟ್ ಪೇಪರ್ ಮಿಲ್ನ ರಾಜೇಶ್ ತಿವಾರಿ, ಖಲೀಲ್ ಕುಲಕರ್ಣಿ, ರಾಜು ರೋಶಯ್ಯ, ನಿವೃತ್ತ ಶಿಕ್ಷಕ ಶ್ರೀಧರ್ ಮೇತ್ರಿ ಸೇರಿದಂತೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.


