ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರ: ತಾಲೂಕಿನ ಅವರಗುಪ್ಪಾ ಗ್ರಾಮದಲ್ಲಿ ನಡೆದ ವಸಂತ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ವಿನಯಕುಮಾರ (ಶಿವಮೊಗ್ಗ ಮೂಲದ) ಎಂಬಾತನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಈತ ಪುಂಡ ಜ್ಯೋತಿಷಿ ಕಮಲಾಕರ ಭಟ್ಟ ಹಾಗೂ ಸುಚಿತ್ರ ಎಂಬವರಿಗೆ ಸಹಕಾರ ನೀಡಿದ್ದಾನೆ ಎಂಬ ಆರೋಪದ ಮೇರೆಗೆ ದಸ್ತಗಿರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ವಿನಯಕುಮಾರನನ್ನು ಇಂದು ಸಿದ್ದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಈತನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು 8 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಪುಂಡ ಜ್ಯೋತಿಷಿ ಕಮಲಾಕರ ಭಟ್ಟ, ಸುಚಿತ್ರ ಸೇರಿದಂತೆ ಇನ್ನೂ 7 ಮಂದಿ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು ಜೈಲಿನಲ್ಲಿದ್ದಾರೆ.

ವಸಂತ ನಾಯ್ಕ್ ಹತ್ಯೆ ಪ್ರಕರಣವು ಜಿಲ್ಲೆ ಮಾತ್ರವಲ್ಲದೆ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಕಾಮಕಾಂಡ, ಮೋಸ, ನಂಬಿಕೆ ದುರುಪಯೋಗ ಹಾಗೂ ಕ್ರೂರ ಹತ್ಯೆ ಎಂಬ ಆರೋಪಗಳು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಪ್ರಕರಣದ ತನಿಖೆಯನ್ನು ಸಿದ್ದಾಪುರ ಪೊಲೀಸರು ಗಂಭೀರವಾಗಿ ಮುಂದುವರೆಸುತ್ತಿದ್ದು, ಇನ್ನು ಕೆಲ ಪ್ರಮುಖ ಮಾಹಿತಿ ಹಾಗೂ ಪಾತ್ರಧಾರಿಗಳ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸತ್ಯಾಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

 

 

Please Share: