ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಯುವಕನೊಬ್ಬ ಕಾಣೆಯಾಗಿರುವ ಕುರಿತು ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಶಿರಸಿ ತಾಲೂಕಿನ ಕಾನಕೊಪ್ಪ ನಿವಾಸಿ ಕೃಷ್ಣ ಯಂಕಾ ದೇವಾಡಿಗಾ ಅವರು ನೀಡಿದ ದೂರಿನ ಮೇರೆಗೆ, ಅವರ ಪುತ್ರ ವಿವೇಕ (25) ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ವ್ಯಕ್ತಿ ಕಾಣೆ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ವಿವೇಕ ಅವರು ಕಳೆದ ಸುಮಾರು 2.5 ವರ್ಷಗಳಿಂದ ಕಾರವಾರ ತಾಲೂಕಿನ ಸದಾಶಿವಗಡದಲ್ಲಿರುವ ಯಮಹಾ ಶೋರೂಂನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಅಲ್ಲಿ ಸಮೀಪದಲ್ಲೇ ವಾಸವಾಗಿದ್ದರು. ಮಾ. 3ರಂದು ರಾತ್ರಿ 11 ಗಂಟೆ ಸುಮಾರಿಗೆ ಅವರು ಬೆಂಗಳೂರಿನಲ್ಲಿ ಇರುವ ತಮ್ಮ ಸಹೋದರ ಹಾಗೂ ಶಿರಸಿಯಲ್ಲಿರುವ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಜಾತ್ರೆಗೆ ಶಿರಸಿಗೆ ಬರುತ್ತೇನೆ ಎಂದು ತಿಳಿಸಿದ್ದಾರೆ.
ಆದರೆ ಮಾ. 4ರಂದು ಬೆಳಿಗ್ಗೆ 9 ಗಂಟೆಯಿಂದ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದೆ, ನಂತರ ಸ್ವಿಚ್ ಆಫ್ ಆಗಿದೆ. ಇದರಿಂದ ಅನುಮಾನಗೊಂಡ ಕುಟುಂಬದವರು ಮಾ. 6ರಂದು ಸದಾಶಿವಗಡದಲ್ಲಿರುವ ಅವರ ವಾಸಸ್ಥಳಕ್ಕೆ ತೆರಳಿ ನೋಡಿದಾಗ, ಕೊಠಡಿಗೆ ಬೀಗ ಹಾಕಿರುವುದು ಕಂಡುಬಂದಿದ್ದು, ಯುವಕ ಎಲ್ಲಿಗೆ ಹೋಗಿದ್ದಾನೆ ಎಂಬುದು ತಿಳಿದುಬಂದಿಲ್ಲ.
ಈ ಕುರಿತು ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ಯುವಕನ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
