ಕರಾವಳಿ ವಾಯ್ಸ್ ನ್ಯೂಸ್
ಮುರುಡೇಶ್ವರ: ಮಧ್ಯರಾತ್ರಿ ಪೆಟ್ರೋಲ್ ಹಾಕಿಸಿಕೊಂಡು ಮನೆಗೆ ಹೊರಟ ಸ್ಕೂಟಿ ಸವಾರನೊಬ್ಬನಿಗೆ ಎದೆಗುಂದಿಸುವ ಘಟನೆ ಸಂಭವಿಸಿದೆ. ಮಂಗಳಮುಖಿಯರ ಗುಂಪೊಂದು ಅಡ್ಡಗಟ್ಟಿ, ಅಸಭ್ಯವಾಗಿ ವರ್ತಿಸಿ, ಬಳಿಕ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ಎಗರಿಸಿ ಪರಾರಿಯಾಗಿದೆ!
ಮಾವಳ್ಳಿ ಗುಮ್ಮನಕಲ್ ನಿವಾಸಿ ಹಾಗೂ ಆರ್‌ಎನ್‌ಎಸ್ ಡಿಪ್ಲೋಮಾ ಕಾಲೇಜಿನ ಲ್ಯಾಬ್ ಇಂಚಾರ್ಜ್ ಅರುಣಕುಮಾರ್ ಭಾಸ್ಕರ ನಾಯ್ಕ ಅವರು ಈ ವಿಚಿತ್ರ ಕಳ್ಳತನಕ್ಕೆ ಬಲಿಯಾದವರು. ನವೆಂಬರ್ 2ರ ರಾತ್ರಿ ಕೆಲಸ ಮುಗಿಸಿಕೊಂಡು ಪೆಟ್ರೋಲ್ ಬಂಕ್‌ನಲ್ಲಿ ಬೈಕ್ ಗೆ ಇಂಧನ ತುಂಬಿಸಿ, ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್ ರಸ್ತೆಯ ರೈಲ್ವೆ ಸ್ಟೇಷನ್ ಹತ್ತಿರ ತಲುಪಿದಾಗ ಇಬ್ಬರು ಮಂಗಳಮುಖಿಯರು ದಾರಿಯಲ್ಲಿ ಅಡ್ಡಗಟ್ಟಿದ್ದಾರೆ.
ಇದಕ್ಕೂ ಮೊದಲು ರೈಲ್ವೆ ಸ್ಟೇಷನ್ ದಿಕ್ಕಿನಿಂದ ಮತ್ತಿಬ್ಬರು ಮಂಗಳಮುಖಿಯರು ಕೂಡ ಬಂದು ಸೇರಿಕೊಂಡರು. ಈ ನಾಲ್ವರು ಕೂಡಿಕೊಂಡು ಅರುಣಕುಮಾರ್ ಅವರತ್ತ ಬಂದು “ಹಣ ಎಷ್ಟು ಇದೆ?” ಎಂದು ಪ್ರಶ್ನಿಸುತ್ತಾ ಅಸಭ್ಯವಾಗಿ ವರ್ತಿಸಿದರು. ಗಾಬರಿಯಾದ ಅರುಣಕುಮಾರ್ ಅವರಿಗೆ ಪ್ರತಿಕ್ರಿಯಿಸುವ ಮುನ್ನವೇ ಒಬ್ಬಳು ಅವರ ಕುತ್ತಿಗೆಯಲ್ಲಿದ್ದ ಸುಮಾರು ₹1 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು, ಎಲ್ಲರೂ ಮಂಕಿ ದಿಕ್ಕಿಗೆ ಓಡಿ ಹೋಗಿದ್ದಾರೆ.
ಅರುಣಕುಮಾರ್ ತಕ್ಷಣವೇ ಮುರುಡೇಶ್ವರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಮಂಗಳಮುಖಿಯರ ಪತ್ತೆಗೆ ಚುರುಕಾಗಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ರಾತ್ರಿ ಸಮಯದಲ್ಲಿ ಪ್ರಯಾಣಿಸುವವರಿಗೆ ಎಚ್ಚರಿಕೆ ಸಂಕೇತವಾಗಿದೆ.


