ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಚಾಕು ಇರಿತದ ಘಟನೆಗಳು ಮತ್ತೆ ಮರುಕಳಿಸುತ್ತಿರುವ ಭೀತಿಯ ನಡುವೆ, ಭಟ್ಕಳ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದ ಗ್ಯಾಂಗ್ ದಾಳಿ ಜನರನ್ನು ಬೆಚ್ಚಿ ಬೀಳಿಸಿದೆ. ಸಣ್ಣ ವಾಗ್ವಾದವೇ ರಕ್ತಪಾತಕ್ಕೆ ತಿರುಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಜಾಲಿ ಬೀಚ್ ರಸ್ತೆ ಬಳಿ ಆರಂಭವಾದ ಮಾತಿನ ಚಕಮಕಿ, ಕೆಲವೇ ಕ್ಷಣಗಳಲ್ಲಿ ಗ್ಯಾಂಗ್ ದಾಳಿಯಾಗಿ ಬದಲಾಗಿದೆ. ಜಾಲಿ ರಸ್ತೆ ನಿವಾಸಿ ಸಯ್ಯದ್ ಮಹ್ಮದ್ ಫಾಹೀಸ್ (40) ಅವರು ಸಂಜೆ 6:30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ವೇಳೆ ಬೊಲೆರೋ ವಾಹನದಿಂದ ಹಾರ್ನ್ ಹಾಕಿದ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, “ರಸ್ತೆ ದೊಡ್ಡದಿದೆ, ಹಾರ್ನ್ ಬೇಡ” ಎಂಬ ಮಾತೇ ಆರೋಪಿಗಳ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಇದಾದ ಬಳಿಕ ಸಂಜೆ 7ರ ಸುಮಾರಿಗೆ ದೇವಿನಗರ ಕ್ರಾಸ್ ಬಳಿ ಆರೋಪಿಗಳು ಬೊಲೆರೋ, ಕೆಂಪು ಮಾರುತಿ ಸ್ವಿಫ್ಟ್ ಕಾರು ಹಾಗೂ ಜಾವಾ ಬೈಕ್‌ನಲ್ಲಿ ಬಂದು ಸ್ಕೂಟರ್ ಅಡ್ಡಗಟ್ಟಿ, ಗುಂಪಾಗಿ ದಾಳಿ ನಡೆಸಿದ್ದಾರೆ. ನಿಂದನೆ, ಜೀವ ಬೆದರಿಕೆಯ ನಂತರ ಚಾಕುಗಳಿಂದ ಇರಿದು ಹಲ್ಲೆ ನಡೆಸಿರುವುದು ಘಟನೆಗೆ ಕ್ರೂರ ಸ್ವರೂಪ ನೀಡಿದೆ.
ಈ ರಕ್ತರಂಜಿತ ದಾಳಿಯಲ್ಲಿ ತೌಸೀಪ್ ಖತೀಬ್ ಹೊಟ್ಟೆ ಭಾಗದಲ್ಲಿ, ಮಹ್ಮದ್ ಜುಪಾಪ್ ಕುತ್ತಿಗೆ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹ್ಮದ್ ವಸೀಂ ದಾಮದಾ ಅವರ ಕೈಗೆ ಗಾಯವಾಗಿದ್ದು, ಮಧ್ಯ ಪ್ರವೇಶಿಸಿದ ಮಹ್ಮದ್ ಅವುನ್ ಅವರಿಗೂ ಕಣ್ಣಿನ ಬಳಿ ಹಾಗೂ ಬೆರಳಿಗೆ ಗಾಯಗಳಾಗಿವೆ.
ಗಲಾಟೆಯ ಗೊಂದಲದ ನಡುವೆ ತೌಸೀಪ್ ಖತೀಬ್ ಅವರ ಸುಮಾರು 20 ಲಕ್ಷ ರೂ. ಮೌಲ್ಯದ ವಾಚ್ ಹಾಗೂ 40 ಸಾವಿರ ರೂ. ನಗದು ಕಳೆದು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ಸಂಬಂಧ ಮಹ್ಮದ್ ತಾಹೀರ್, ಕೈಫ್ ಕುಟ್ಟಿ, ಯಾಸೀನ್ ಪಾಷಾ, ಮಹ್ಮದ್ ಮೌಲಾ @ ಮುಸ್ತಾಕ್ ಹಾಗೂ ಮಹ್ಮದ್ ಖಾಸೀಂ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಮರುಕಳಿಸುತ್ತಿರುವ ಹಿಂಸಾಚಾರ:
ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಚಾಕು ಇರಿತ, ಗ್ಯಾಂಗ್ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಣ್ಣಪುಟ್ಟ ವಿಚಾರಗಳು ಕೂಡ ಹಿಂಸಾತ್ಮಕ ತಿರುವು ಪಡೆಯುತ್ತಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಜೋರಾಗಿದೆ.
