ಕರಾವಳಿ ವಾಯ್ಸ್ ನ್ಯೂಸ್
ಸಿದ್ದಾಪುರ: ಚಿಕ್ಕಮಗಳೂರಿನ ಸೇಂಟ್ ಮೇರೀಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿಯ ಕ್ರೀಡಾಪಟು ತೇಜಸ್ ಶ್ರೀಧರ್ ನಾಯ್ಕ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸಿಐಎಸ್‌ಸಿಇ (CISCE) ಅಥ್ಲೆಟಿಕ್ಸ್ ಕ್ರೀಡಾಕೂಟದ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ತೇಜಸ್ 52.56 ಮೀಟರ್ ದೂರ ಹ್ಯಾಮರ್ ಎಸೆದು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದಿದ್ದ ಅವರು, ರಾಜ್ಯಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಎಸ್‌ಜಿಎಫ್‌ಐ (SGFI) ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.
ತರಬೇತುದಾರ ಹರ್ಷ ಚಂದಾವರ್ಕರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ತೇಜಸ್ ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಉಪನ್ಯಾಸಕ ವೃಂದ, ಕ್ರೀಡಾಪ್ರೇಮಿಗಳು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿ, ರಾಷ್ಟ್ರಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.


