ಕರಾವಳಿ ವಾಯ್ಸ್ ನ್ಯೂಸ್

ಅಂಕೋಲಾ: ಸಹಕಾರಿ ಕ್ರೆಡಿಟ್ ಸೊಸೈಟಿಯ ಸಿಬ್ಬಂದಿಯೊಬ್ಬ ಗ್ರಾಹಕರ ಬಂಗಾರ ಹಾಗೂ ಹಣವನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ದಿ ದೈವಜ್ಞ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ಅಂಕೋಲಾ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶ ಅಶೋಕ ಶೇಟ್ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೊಸೈಟಿಯ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಶ್ಯಾಮ ಕೃಷ್ಣ ಬಾಂದೇಕರ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು 19-10-2025ರಿಂದ 06-02-2026ರ ನಡುವಿನ ಅವಧಿಯಲ್ಲಿ ತನ್ನ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯ ಎಸಗಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಪ್ರಕಾರ, ವಿವಿಧ ಗ್ರಾಹಕರಿಂದ ಸಾಲದ ವಿರುದ್ಧ ಜಮಾ ಮಾಡಲಾಗಿದ್ದ ಒಟ್ಟು 208.800 ಗ್ರಾಂ ಬಂಗಾರವನ್ನು, ಅಂದಾಜು 9,80,500 ರೂ. ಮೌಲ್ಯದೊಂದಿಗೆ ಆರೋಪಿಯು ಸ್ಟ್ರಾಂಗ್ ರೂಮ್‌ನಿಂದ ದುರುಪಯೋಗಪಡಿಸಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಗ್ರಾಹಕರ ಸಹಿಗಳನ್ನು ನಕಲಿ ಮಾಡಿ ಹಣ ವರ್ಗಾವಣೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಅಲ್ಲದೆ, ಕೆಲವು ಗ್ರಾಹಕರ ಉಳಿತಾಯ ಖಾತೆಯಿಂದ ಹಣ ತೆಗೆದು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಸಂಘದ ನಿಯಮಾನುಸಾರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡದೇ ಸುಮಾರು 50,000 ರೂ. ಹಣವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Please Share: