ಬೆಂಗಳೂರು: ಬೇಲೇಕೇರಿ ಬಂದರಿನಿಂದ ಅಕ್ರಮ ಕಬ್ಬಿಣದ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಇಡಿ (ED) ಬಂಧಿಸಿದ್ದು, ಸೆಪ್ಟೆಂಬರ್ 12ರವರೆಗೆ ಕಸ್ಟಡಿಗೆ ವಹಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಮಂಗಳವಾರ ರಾತ್ರಿ ಬಂಧಿತರಾದ ಸೈಲ್ ಅವರನ್ನು ಬುಧವಾರ ಬೆಳಿಗ್ಗೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ ನ್ಯಾಯಾಲಯವು ಇಡಿ ವಶವನ್ನು ಇನ್ನೂ ಎರಡು ದಿನ ವಿಸ್ತರಿಸಿದೆ.

ಕಳೆದ ಆಗಸ್ಟ್ 13-14ರಂದು ಇಡಿ ಅಧಿಕಾರಿಗಳು ಕಾರವಾರ ಶಾಸಕ ಸತೀಶ್ ಸೈಲ್ ಅವರ ಕಾರವಾರದ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಬೇಲೇಕೇರಿ ಬಂದರಿನಿಂದ ನಡೆದ ಅಕ್ರಮ ಕಬ್ಬಿಣದ ಅದಿರು ಸಾಗಾಟಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಈ ದಾಳಿ ನಡೆದಿತ್ತು.

2011ರಲ್ಲಿ ಅಂಕೋಲಾದ ಬೇಲೇಕೇರಿ ಬಂದರಿನಿಂದ ಸಾವಿರಾರು ಟನ್ ಕಬ್ಬಿಣದ ಅದಿರು ನಾಪತ್ತೆ ಆಗಿದ್ದ ಪ್ರಕರಣದಲ್ಲಿ ಸೈಲ್ ವಿರುದ್ಧ ಗಂಭೀರ ಆರೋಪಗಳು ಹೊರಬಿದ್ದಿತ್ತು. ಕಳೆದ ವರ್ಷ ಇದೇ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಏಳು ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದ್ದರೂ, ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ಅಮಾನತು ನೀಡಿದ್ದರಿಂದ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

 

 

 

 

 

 

 

Please Share: