ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ಪಟ್ಟಣದ ಗಿಬ್ ಸರ್ಕಲ್ ಸಮೀಪವಿರುವ ಖಾದಿಮ್ ಚಪ್ಪಲಿ ಅಂಗಡಿಯಲ್ಲಿ ಮಂಗಳವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ರಾತ್ರಿ ಸಮಯದಲ್ಲಿ ಅಂಗಡಿಯೊಳಗಿಂದ ಏಕಾಏಕಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲವೇ ಕ್ಷಣಗಳಲ್ಲಿ ಬೆಂಕಿ ಭಾರೀ ಪ್ರಮಾಣದಲ್ಲಿ ವ್ಯಾಪಿಸಿದೆ.
ಅಂಗಡಿಯೊಳಗೆ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಪ್ಪಲಿ ಹಾಗೂ ಇತರೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಈ ಅಗ್ನಿ ಅವಘಡದಿಂದ ಸುಮಾರು 8 ಲಕ್ಷ ರೂ. ಗಳಿಗೂ ಅಧಿಕ ಆರ್ಥಿಕ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬೆಂಕಿಯ ತೀವ್ರತೆ ಹೆಚ್ಚಿದಂತೆ ಸುತ್ತಮುತ್ತಲಿನ ವ್ಯಾಪಾರಸ್ಥರು ಮತ್ತು ಸ್ಥಳೀಯರು ಆತಂಕಗೊಂಡು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಲವು ಗಂಟೆಗಳ ಕಾಲ ಹರಸಾಹಸಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಅಂಗಡಿ ಸಂಪೂರ್ಣವಾಗಿ ಸುಟ್ಟು ಹಾನಿಗೊಳಗಾಗಿದ್ದು, ವ್ಯಾಪಾರಸ್ಥರಿಗೆ ಭಾರೀ ನಷ್ಟ ಉಂಟಾಗಿದೆ.
ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ವೇ ಅಗ್ನಿ ಅವಘಡಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

