ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ದೇವರ ಬಂಗಾರ ಮತ್ತು ಕಾಣಿಕೆ ಹುಂಡಿಯ ಹಣಕ್ಕೂ ಕಣ್ಣು ಹಾಕಿದ್ದ ಅಂತರ್‌ಜಿಲ್ಲಾ ಕುಖ್ಯಾತ ಕಳ್ಳರ ತಂಡವನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ತಾಲೂಕಿನ ಹುಲೇಕಲ್ ಚೌಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಶೀಘ್ರವಾಗಿ ಬೇಧಿಸಿದ್ದು, ಬಂಧಿತರಿಂದ ₹1.50 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಮತ್ತು ₹60 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತರು — ಬಾಲಕುಮಾರ ವಾಸು ಕೆ., ಬಾಲರಾಜು ಸ್ವಾಮಿ (ಅಂತರಗಂಗೆ, ಭದ್ರಾವತಿ) ಹಾಗೂ ಮಹಮ್ಮದ್ ಅಲಿ ಅಲಿಕಾಕಾ ಜಯರಾಜ್ (ಅಂತರಗಂಗೆ, ಭದ್ರಾವತಿ) ಎಂದು ಗುರುತಿಸಲಾಗಿದೆ. ಇವರು ಹಲವು ಜಿಲ್ಲೆಗಳ ದೇವಾಲಯಗಳಲ್ಲಿ ಕಳವು ನಡೆಸಿದ್ದ ದಾಖಲೆಗಳು ಬೆಳಕಿಗೆ ಬಂದಿವೆ.
ಕಾರ್ಯಾಚರಣೆ ಎಸ್.ಪಿ. ದೀಪನ್ ಮತ್ತು ಡಿ.ಎಸ್.ಪಿ. ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಸಿ.ಪಿ.ಐ. ಶಶಿಕಾಂತ ವರ್ಮಾ ನೇತೃತ್ವದಲ್ಲಿ ಪಿ.ಎಸ್.ಐ. ಸಂತೋಷಕುಮಾರ, ಅಶೋಕ ರಾಥೋಡ ಹಾಗೂ ಗ್ರಾಮೀಣ ಠಾಣೆ ಸಿಬ್ಬಂದಿಗಳಿಂದ ಯಶಸ್ವಿಯಾಗಿ ನೆರವೇರಿತು.
ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. “ದೇವಾಲಯಗಳ ಸುರಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.
ಬಯಲಿಗೆ ಬಂದ ಈ ಕಳ್ಳರ ಕೃತ್ಯಗಳು ದೇವರ ಮನೆಯನ್ನೇ ದುರುಪಯೋಗ ಪಡಿಸಿಕೊಂಡ ಕ್ರೌರ್ಯಕ್ಕೆ ಉದಾಹರಣೆ ಎನ್ನಲಾಗಿದೆ!


