ಮುಂಡಗೋಡ: ಖ್ಯಾತ ಯೂಟ್ಯೂಬರ್ ಕ್ವಾಜಾ ಮೊಹಮ್ಮದ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಸುಳ್ಳು ದಾಖಲೆಗಳನ್ನು ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿರುವ ಕುರಿತು ವಿವಾದ ತೀವ್ರಗೊಂಡಿದೆ. ಸೋಮವಾರ ಉಪನೋಂದಣಿ ಕಚೇರಿಯಲ್ಲಿ ನಡೆದ ಈ ಘಟನೆ ಗಲಾಟೆಗೆ ತಿರುಗಿದ್ದು, ಹಿಂದೂಪರ ಸಂಘಟನೆಗಳ ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಕಳೆಪ್ಪ ಎಂದು ಪರಿಚಿತನಾಗಿರುವ ಕ್ವಾಜಾ, ಮುಂಡಗೋಡ ಗಾಂಧಿನಗರದಲ್ಲಿ ವಾಸವಿರುವಂತೆ ನಕಲಿ ದಾಖಲೆ ತೋರಿಸಿ ವಿವಾಹ ನೋಂದಣಿ ಮಾಡಿಕೊಂಡಿದ್ದಾನೆ ಎಂಬುದು ಆರೋಪ. ಆದರೆ ಗಾಂಧಿನಗರದಲ್ಲಿ ಅವನು ವಾಸಿಸುವ ಯಾವುದೇ ದೃಢ ದಾಖಲೆ ಇಲ್ಲವೆಂದು ಸಂಘಟನೆಗಳ ಮುಖಂಡರು ಪ್ರಶ್ನೆ ಎತ್ತಿದರು.
ಮದುವೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸದೇ ನೋಂದಣಿ ಮಾಡಲಾಗಿದೆ, ಹಿಂದೂ ಯುವತಿಯನ್ನು ಮತಾಂತರ ಮಾಡುವ ದುರುದ್ದೇಶವೂ ಇದಕ್ಕೆ ಕಾರಣವಾಗಿರಬಹುದು ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದರು.
ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ ಹಾಗೂ ಭಜರಂಗದಳದ ಕಾರ್ಯಕರ್ತರು ಧಾರವಾಡ, ಹುಬ್ಬಳ್ಳಿ ಮತ್ತು ಮುಂಡಗೋಡದಿಂದ ಆಗಮಿಸಿ ನೋಂದಣಿ ಅಧಿಕಾರಿಯನ್ನು ಪ್ರಶ್ನಿಸಿ, ಈ ಮದುವೆಯ ನೋಂದಣಿಯನ್ನು ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಿದರು. ಯುವತಿ ಗಾಯತ್ರಿ ಅವರ ತಾಯಿ ಕೂಡ ಕಚೇರಿಗೆ ಬಂದು, ತಮ್ಮ ಮಗಳನ್ನು ಮೋಸದಿಂದ ಮದುವೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.
ಘಟನೆ ವೇಳೆ ಸ್ಥಳಕ್ಕಾಗಮಿಸಿದ ಪಿಎಸ್‌ಐ ಯಲ್ಲಾಲಿಂಗ ಕನ್ನೂರ, ಕಾರ್ಯಕರ್ತರನ್ನು ಸಮಾಧಾನಪಡಿಸಿ, ಯಾವುದೇ ಗಲಾಟೆ ಮಾಡದೇ ಠಾಣೆಗೆ ಬಂದು ಅಧಿಕೃತ ದೂರು ಸಲ್ಲಿಸುವಂತೆ ಮನವಿ ಮಾಡಿದರು.


