ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: “ಕರ್ತವ್ಯವೆ ದೇವರು” ಎಂಬ ನಂಬಿಕೆಯಿಂದ ಮಕ್ಕಳಿಗೆ ಬಿಸಿಯೂಟ ತಯಾರಿಸುತ್ತಿದ್ದ ಸಿಬ್ಬಂದಿಯೋರ್ವರು ಕರ್ತವ್ಯದಲ್ಲಿಯೇ ಜೀವ ತ್ಯಜಿಸಿದ ಹೃದಯವಿದ್ರಾವಕ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯ ಬಿಸಿಯೂಟ ಕೊಠಡಿಯಲ್ಲಿ ಗುರುವಾರ ಮಧ್ಯಾಹ್ನ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಿಬ್ಬಂದಿ ಮಹಾದೇವಿ ಶಿವಾಜಿ ನೆರವಡೆ (50) ಅಕಸ್ಮಾತ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಹೋದ್ಯೋಗಿಗಳು ಹಾಗೂ ಶಿಕ್ಷಕರು ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಆಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಬಿಸಿಯೂಟ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಾದೇವಿ, ಕಳೆದ ಐದು ವರ್ಷಗಳಿಂದ ಜನತಾ ವಿದ್ಯಾಲಯದಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಟುಂಬದ ಮೇಲೊಂದು ದುಃಖದ ನೆರಳು ಈಗಾಗಲೇ ಇತ್ತು — ಕಳೆದ ವರ್ಷ ಪತಿ ನಿಧನ ಹೊಂದಿದ್ದರೆ, ಕೆಲವೇ ದಿನಗಳಲ್ಲಿ ಮಗನೂ ಪ್ರಾಣ ಕಳೆದುಕೊಂಡಿದ್ದ. ಇದೀಗ ಮಹಾದೇವಿ ಅವರ ಅಗಲಿಕೆಯಿಂದ ಕುಟುಂಬದ ಏಕೈಕ ಆಶೆಯೂ ನಶಿಸಿಹೋದಂತಾಗಿದೆ.
ನಗರದ ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.


