ಕರಾವಳಿ ವಾಯ್ಸ್ ನ್ಯೂಸ್
ಶಿವಮೊಗ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದವನ್ನು ಅಕ್ಟೋಬರ್ 27ರಂದು ಶಿವಮೊಗ್ಗದ ವಾರ್ತಾಭವನದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ವತಿಯಿಂದ ಆಯೋಜಿಸಿರುವ ಈ ಸಂವಾದದಲ್ಲಿ ಯೋಜನೆಯ ಉದ್ದೇಶ, ತಾಂತ್ರಿಕ ಅಂಶಗಳು ಹಾಗೂ ಪರಿಸರದ ಮೇಲಿನ ಪರಿಣಾಮದ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿಸ್ತೃತ ಮಾಹಿತಿ ನೀಡಲಾಗಲಿದೆ.
ಕೆಪಿಸಿಎಲ್‌ನ ಮುಖ್ಯ ಅಭಿಯಂತರರು ನೀಡಿದ ಪ್ರಕಟಣೆಯ ಪ್ರಕಾರ, ಸಾಗರ ತಾಲ್ಲೂಕಿನಲ್ಲಿ ನಿರ್ಮಾಣಗೊಳ್ಳಲಿರುವ 2000 ಮೆಗಾವಾಟ್ ಸಾಮರ್ಥ್ಯದ ಈ ಯೋಜನೆ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ಹೆಜ್ಜೆಯಾಗಲಿದೆ.
ಯೋಜನೆ ಕುರಿತು ಕೆಲವು ತಪ್ಪು ಪ್ರಚಾರಗಳು ಮತ್ತು ಗೊಂದಲಕಾರಿ ಮಾಹಿತಿಗಳು ಹರಿದಾಡುತ್ತಿರುವ ಹಿನ್ನೆಲೆ, ಯೋಜನೆಯ ನೈಜಾಂಶಗಳನ್ನು ಸಾರ್ವಜನಿಕರಿಗೆ ತಲುಪಿಸಲು ಹಾಗೂ ಪರಿಸರ, ವನ್ಯಜೀವಿ ಮತ್ತು ಜನಜೀವನದ ಮೇಲೆ ಯಾವುದೇ ಹಾನಿ ಉಂಟಾಗದ ರೀತಿಯಲ್ಲಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ ಎಂಬ ವಿಶ್ವಾಸ ನೀಡಲು ಈ ಸಂವಾದವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಈ ಕುರಿತಂತೆ ಕೆಪಿಸಿಎಲ್‌ಗೆ ನಿರ್ದೇಶನ ನೀಡಿದ್ದು, ಮಾಧ್ಯಮಗಳ ಮೂಲಕ ನಿಖರ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ದಿನಾಂಕ 27 ಅಕ್ಟೋಬರ್ 2025, ಸಮಯ ಬೆಳಿಗ್ಗೆ 10.30ಕ್ಕೆ, ಸ್ಥಳ ಶಿವಮೊಗ್ಗ ವಾರ್ತಾಭವನ — ಈ ಸಂದರ್ಭದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳು ಭಾಗವಹಿಸಲು ಆಹ್ವಾನಿಸಲಾಗಿದೆ.


