ಕರಾವಳಿ ವಾಯ್ಸ್ ನ್ಯೂಸ್

ಅಂಕೋಲಾ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಯೆಂಬ ಆರೋಪದಡಿ ಅಂಕೋಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಅವರು ನಾಪತ್ತೆಯಾಗಿದ್ದಾರೆ.

ಈ ನಾಪತ್ತೆಯ ಬಳಿಕ, ಉಪನ್ಯಾಸಕರಿಗೆ ಆಶ್ರಯ ನೀಡಿ ಗೋವಾಗೆ ತೆರಳಲು ಸಹಕರಿಸಿದ ಆರೋಪದಡಿ ಗೋಕರ್ಣದ ಸನಿಹದ ನಾಗರಾಜ್ ಗೌಡ ಮತ್ತು ವಾಸು ಎನ್ನುವ ಇಬ್ಬರನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನ ಹಿನ್ನೆಲೆಯಲ್ಲಿ, ಉಪನ್ಯಾಸಕರ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು. ಈ ವಿಷಯ ಬಯಲಿಗೆ ಬಂದ ನಂತರ ಕಾಲೇಜು ಆವರಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿ, ಉಪನ್ಯಾಸಕನ ಅಮಾನತು ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಪೊಲೀಸರ ಪ್ರಾಥಮಿಕ ತನಿಖೆಯಿಂದ ಹಲವಾರು ವಿದ್ಯಾರ್ಥಿಗಳಿಂದಲೂ ಉಪನ್ಯಾಸಕನ ದುರ್ವರ್ತನೆ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ತಿಳಿದ ಕೂಡಲೇ ರಾಮಚಂದ್ರ ಅಂಕೋಲೆಕರ್ ಅಂತರಧಾನಗೊಂಡಿದ್ದು, ಅವರನ್ನು ಪತ್ತೆ ಹಚ್ಚಲು ಪೊಲೀಸರು ತೀವ್ರ ಶೋಧ ಪ್ರಾರಂಭಿಸಿದ್ದಾರೆ.

ಇದೇ ವೇಳೆ, ಉಪನ್ಯಾಸಕರಿಗೆ ಆಶ್ರಯ ನೀಡಿದ ಆರೋಪದಡಿ ನಾಗರಾಜ ಗೌಡ ಮತ್ತು ವಾಸು ಎಂಬವರನ್ನು ಬಂಧಿಸಿ, ವಿಚಾರಣೆ ಮುಂದುವರೆಸಲಾಗಿದೆ. ಇವರು ಆರೋಪಿ ಪರಾರಿಯಾಗಲು ಕಾರು ವ್ಯವಸ್ಥೆ ಕೂಡ ಮಾಡಿದ್ದಾರೆ ಎನ್ನಲಾಗಿದೆ.

ಬುಧವಾರ ಮುಂಜಾನೆ, ಪ್ರಕರಣದ ಕುರಿತು ಸ್ಪಷ್ಟನೆ ಕೇಳಲು ವಿದ್ಯಾರ್ಥಿಗಳು, ಪೋಷಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಅಂಕೋಲಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಉಪನ್ಯಾಸಕರ ಅಮಾನತು ಹಾಗೂ ಪ್ರಾಚಾರ್ಯರ ವರ್ಗಾವಣೆಯನ್ನೂ ಆಗ್ರಹಿಸಿದ್ದಾರೆ.

 

 

Please Share: