ರಾಮನಗರ:

ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲೆಮಾಲ ಅಮಶೇತ ಗ್ರಾಮದಲ್ಲಿ ದೇವರ ತೆಂಗಿನಕಾಯಿ ವಿವಾದದಿಂದ ಮಹಿಳೆಯೋರ್ವಳ ಹತ್ಯೆಯಾದ ಘಟನೆ‌ನಡೆದಿದೆ.

ಭಾಗ್ಯಶ್ರೀ ಸೋನು ವರಕ್ (40) ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದ್ದು, ಅವರ ಮೈದುನ ದೊಂಡು ತಂದೆ ಗಂಗಾರಾಮ ವರಕ್ ಕೊಲೆ ಆರೋಪಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಎಸ್ಪಿ ದೀಪನ್‌ಎಂ.ಎನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮೃತ ಭಾಗ್ಯಶ್ರೀ ಅವರ ಸಹೋದರಿ ಶ್ರೀಮತಿ ಲಕ್ಷ್ಮಿ ಗಂಗಾರಾಮ್ ಶೆಲ್ಕೆ ಅವರು ಈ ಸಂಬಂಧ ದೂರು ನೀಡಿದ್ದಾರೆ. ಆರೋಪಿ ದೊಂಡು ಗಂಗಾರಾಮ ವರಕ್, ಮೃತ ಭಾಗ್ಯಶ್ರೀ ಅವರ ಗಂಡ ಸೋನು ವರಕ ಅವರ ಅಣ್ಣನಾಗಿದ್ದು, ಇವರ ಮನೆಗಳು ಅಕ್ಕಪಕ್ಕದಲ್ಲಿವೆ. ಐದಾರು ವರ್ಷಗಳಿಂದ ಕುಟುಂಬಗಳ ನಡುವೆ ವಿವಾದವಿತ್ತು ಎಂದು ತಿಳಿದುಬಂದಿದೆ. ವಿವಾದಕ್ಕೆ ಪ್ರಮುಖ ಕಾರಣವೆಂದರೆ, ದೊಂಡು ಗಂಗಾರಾಮ ವರಕ್ ಅವರು ಪೂಜೆ ಮಾಡುತ್ತಿದ್ದ ದೇವರ ಎರಡು ತೆಂಗಿನಕಾಯಿಗಳು ಭಾಗ್ಯಶ್ರೀ ಮತ್ತು ಸೋನು ವರಕ್ ಅವರ ಬಳಿ ಇವೆ ಎಂಬ ನಂಬಿಕೆ. ಆ ತೆಂಗಿನಕಾಯಿಗಳು ತಮ್ಮ ಬಳಿ ಬಂದರೆ, ತಮ್ಮ ಮನೆಯ ಕಷ್ಟಗಳು, ವಿಶೇಷವಾಗಿ ತಮ್ಮ ಮಗನ ವೈದ್ಯಕೀಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ದೊಂಡು ಗಂಗಾರಾಮ ವರಕ್ ನಂಬಿದ್ದರು. ಇದೇ ವಿಷಯದಲ್ಲಿ ಮನಸ್ತಾಪ ಉಂಟಾಗಿತ್ತು. ಮುಂಜಾನೆ ಸುಮಾರು 10 ಗಂಟೆ ಸುಮಾರಿಗೆ ಭಾಗ್ಯಶ್ರೀ ಅವರು ಮನೆಯಿಂದ ಹೊರಬಂದಾಗ, ದೊಂಡು ಗಂಗಾರಾಮ ವರಕ್ ಅವರು ಸಲಕಿಯಿಂದ ಅವರ ತಲೆಗೆ ಹೊಡೆದಿದ್ದಾರೆ. ಇದರಿಂದ ಭಾಗ್ಯಶ್ರೀ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿ ದೊಂಡು ಗಂಗಾರಾಮ ವರಕ್ (55) ಪರಾರಿಯಾಗಿದ್ದಾನೆ. ಆರೋಪಿಯನ್ನು ಪತ್ತೆಹಚ್ಚಲು ಎರಡು ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Please Share: