ಕಾರವಾರ: ನಿವೃತ್ತ ಯೋಧರು, ಹುತಾತ್ಮ ಯೋಧರ ಅವಲಂಬಿತರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕುಟುಂಬಗಳು ವರ್ಷಾನುಗಟ್ಟಲೆ ತೊಂದರೆ ಅನುಭವಿಸುತ್ತಿರುವ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ಬಂದಿದೆ.
ಜಿಲ್ಲೆಯಲ್ಲಿ ಕಾನೂನಿನ ಪ್ರಕಾರ ಸೌಲಭ್ಯ ನೀಡಬೇಕಿದ್ದರೂ, ಜಮೀನು ಹಾಗೂ ನಿವೇಶನಗಳನ್ನು ಸಮಯಕ್ಕೆ ನೀಡದೆ ಸತಾಯಿಸಿರುವ ಆರೋಪದ ಮೇಲೆ, ಕಾರವಾರ, ಶಿರಸಿ, ಕುಮಟಾ, ಭಟ್ಕಳ ಉಪವಿಭಾಗಾಧಿಕಾರಿಗಳು ಹಾಗೂ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ, ದಾಂಡೇಲಿ ತಾಲೂಕುಗಳ ತಹಸೀಲ್ದಾರ್‌ಗಳ ವಿರುದ್ಧ ಲೋಕಾಯುಕ್ತ ಕೇಂದ್ರ ಕಛೇರಿ, ಬೆಂಗಳೂರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಕರ್ನಾಟಕ ಲೋಕಾಯುಕ್ತ ಕಾರವಾರದ ಪೊಲೀಸ್ ಅಧೀಕ್ಷಕರು ಪ್ರಕಟಣೆಯ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ.
ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಯೋಧರಿಗೆ ಸ್ವಾವಲಂಬಿ ಜೀವನಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಫಲಾನುಭವಿಗಳು ಅನಾವಶ್ಯಕ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ದೂರಿನ ಸಾರಾಂಶ.


