ಕರಾವಳಿ ವಾಯ್ಸ್ ನ್ಯೂಸ್

ಯಲ್ಲಾಪುರ: ತಾಲೂಕಿನ ಮಂಚಿಕೇರಿ ವ್ಯಾಪ್ತಿಯ ತುಡುಗುಣಿ ರಸ್ತೆಯ ಕಾಡಿನಲ್ಲಿ ಅರಣ್ಯ ಜೀವಿ ಬೇಟೆಯ ನಿಗೂಢ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಬಂದೂಕಿನಿಂದ ಗುಂಡು ಹಾರಿಸಿ ಜಿಂಕೆಯೊಂದನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಂಗಳವಾರ ಬೆಳಗಿನ ಜಾವ ತುಡುಗುಣಿ ಸೇತುವೆ ಸಮೀಪದ ಕಾಡಿನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರ ಹೇಳಿಕೆಯ ಪ್ರಕಾರ ಗುಂಡಿನ ಸದ್ದು ಕೇಳಿದ ತಕ್ಷಣ ಬ್ಯಾಟರಿ ಬೆಳಕು ಕಂಡು ಬಂದಿದೆ. ಸ್ಥಳಕ್ಕೆ ಧಾವಿಸಿದಾಗ ಜಿಂಕೆಯ ಶವ ಪತ್ತೆಯಾಗಿದೆ, ಆದರೆ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಘಟನೆಯ ಮಾಹಿತಿ ತಿಳಿದ ಕೂಡಲೇ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ತನಿಖೆಗಾಗಿ ದಾಂಡೇಲಿಯಿಂದ ಅರಣ್ಯ ತಜ್ಞರು ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅರಣ್ಯ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬೇಟೆಯಾಟದಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ಬಲೆ ಬೀಸಿದೆ.

 

 

Please Share: