ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಮುಂಬೈಯಿಂದ ಮಂಗಳೂರಿಗೆ ಹೊರಟಿದ್ದ ಸಾಮಾನ್ಯ ಬಸ್ — ಆದರೆ ಅದರೊಳಗೆ ಸಾಗುತ್ತಿತ್ತು ಸಿನಿಮಾಕ್ಕೆ ಸಾಟಿಯಾದ ರಹಸ್ಯ ಕಥೆ! ಸಾಧಾರಣ ಸ್ವೀಟ್ ಬಾಕ್ಸ್ ಮಾದರಿಯ ಸೂಟ್ಕೇಸ್ನೊಳಗೆ ಇದ್ದದ್ದು ಸಿಹಿತಿಂಡಿ ಅಲ್ಲ — ಹೊಳೆಯುತ್ತಿದ್ದವು ಚಿನ್ನದ ಬಳೆಗಳು ಹಾಗೂ ಲಕ್ಷಾಂತರ ರೂ. ನಗದು!
ಭಟ್ಕಳ ಪಟ್ಟಣದ ಸೀಮೆಯಲ್ಲಿ ರೂಟೀನ್ ತಪಾಸಣೆಯ ವೇಳೆ ಪೊಲೀಸರು ಬಸ್ ನಿಲ್ಲಿಸಿದರು. ಆರಂಭದಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಚಾಲಕನ ಹತ್ತಿರ ಇದ್ದ ಒಂದೇ ಒಂದು ಸೂಟ್ಕೇಸ್ ಅವರ ಕಣ್ಣಿಗೆ ಬಿತ್ತು. ಅದರ ತೂಕ, ಅದರ ಮಾದರಿ, ಅದರ ಸೀಕ್ರೆಟಿವ್ ಲುಕ್! ಎಲ್ಲವೂ ಸಂಶಯ ಹುಟ್ಟಿಸಿದವು.
ಪೊಲೀಸರು ಅದನ್ನು ತೆರೆದ ಕ್ಷಣದಲ್ಲಿ, ದೃಶ್ಯವೇ ಬದಲಾಗಿತು. ಕ್ಯಾಮೆರಾ ಸ್ಲೋ ಮೋಶನ್ನಲ್ಲಿ ಹೊಳೆಯುವ ಬಂಗಾರ!
ಸೂಟ್ಕೇಸ್ನೊಳಗೆ ಪತ್ತೆಯಾದವು 401 ಗ್ರಾಂ ತೂಕದ 32 ಬಂಗಾರದ ಬಳೆಗಳು ಮತ್ತು ₹500 ಮುಖಬೆಲೆಯ ₹50 ಲಕ್ಷ ನಗದು. ಒಟ್ಟು ಮೌಲ್ಯ — ಸುಮಾರು ಒಂದು ಕೋಟಿ ರೂ.!
ಈ ದೃಶ್ಯ ನೋಡಿದ ಪೊಲೀಸರು ನಿಜಕ್ಕೂ ಬೆಚ್ಚಿಬಿದ್ದರು. ಚಾಲಕನನ್ನು ವಿಚಾರಿಸಿದಾಗ ಹೊರಬಂದ ಮಾಹಿತಿ ಇನ್ನೂ ಕುತೂಹಲ ಹುಟ್ಟಿಸುವಂತದ್ದು.
ಮುಂಬೈಯಲ್ಲಿ ಯಾರೋ ಅನಾಮಿಕರು ನನ್ನ ಕೈಗೆ ಸೂಟ್ಕೇಸ್ ಕೊಟ್ಟರು, ಎಂದ ಚಾಲಕ. ಅವರು ಹೇಳಿದ್ದು — ‘ಮಂಗಳೂರು ಬಸ್ ನಿಲ್ದಾಣಕ್ಕೆ ಬಂದಾಗ ‘ಇರ್ಫಾನ್’ ಎನ್ನುವವರು ಬಂದು ಈ ಬ್ಯಾಗ್ ತೆಗೆದುಕೊಳ್ಳುತ್ತಾರೆ. ಬಸ್ ನಂಬರ್ ಹೇಳುತ್ತೇವೆ, ನಮ್ಮವರು ಬಂದು ಕಲೆಕ್ಟ್ ಮಾಡ್ತಾರೆ” ಅಂತ.
ಆದರೆ ಭಟ್ಕಳಕ್ಕೆ ಬರುವಷ್ಟರಲ್ಲಿ ಈ ಸೂಟ್ಕೇಸ್ನೊಳಗಿನ ವಿಷಯ ಪೊಲೀಸರ ಕೈಗೆ ಸಿಕ್ಕಿತ್ತು.
ಪೊಲೀಸರು ಇದೀಗ ಈ ಅನಾಮಿಕನ ಪತ್ತೆಗೆ ನಾನಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಹಣ ಮತ್ತು ಚಿನ್ನ ಯಾರದ್ದು? ಹವಾಲಾ ವ್ಯವಹಾರವೇ? ಅಥವಾ ಬೇರೆಯದೇ ಕಳ್ಳಸಾಗಣೆ ಜಾಲದ ಲಿಂಕ್? — ಎಲ್ಲವೂ ಈಗ ತನಿಖೆಯ ಭಾಗವಾಗಿದೆ.
ಭಟ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಈ ಪ್ರಕರಣ ಈಗ ಸಸ್ಪೆನ್ಸ್ ಥ್ರಿಲ್ಲರ್ನಂತೆ ರೂಪ ಪಡೆದಿದೆ. ಪ್ರತಿ ಹೊಸ ಮಾಹಿತಿ ಹೊಸ ಟ್ವಿಸ್ಟ್ ನೀಡುತ್ತಿದೆ.
ಒಂದು ಸೂಟ್ಕೇಸ್… ಅನಾಮಿಕರ ರಹಸ್ಯ… ಚಿನ್ನ-ಹಣದ ಹೊಳಪು… ಭಟ್ಕಳದ ಈ “ಗೋಲ್ಡನ್ ಬಸ್ ಸ್ಟೋರಿ” ಮುಂದಿನ ಸನ್ನಿವೇಶಕ್ಕೆ ಎಲ್ಲರ ಕಣ್ಣು!


