ಗೋಕರ್ಣ: ಪ್ರವಾಸಿಗರ ನೆಚ್ಚಿನ ತಾಣವಾದ ಗೋಕರ್ಣದ ಮುಖ್ಯ ಕಡಲತೀರದ ರಾಮತೀರ್ಥದ ಬಳಿ ಪಾಂಡವರ ಗುಹೆಯಲ್ಲಿ ವಾಸವಿದ್ದ ರಷ್ಯಾದ ನೀನಾ ಕುಟೀನಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಕೊನೆಗೂ ಸೋಮವಾರ ರಷ್ಯಾಗೆ ಹಿಂತಿರುಗಿಸಲಾಗಿದೆ.

ಜುಲೈ 10ರಂದು ಗುಡ್ಡ ಕುಸಿತದ ಪ್ರದೇಶವಾದ ರಾಮತೀರ್ಥದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ಮಳೆಗಾಲದ ಮಧ್ಯೆ ನೀನಾ ತನ್ನ ಇಬ್ಬರು ಮಕ್ಕಳಾದ ಪ್ರೆಯಾ (6) ಹಾಗೂ ಅಮಾ (4) ಜೊತೆ ಗುಹೆಯಲ್ಲಿ ವಾಸಿಸುತ್ತಿರುವುದನ್ನು ಪತ್ತೆ ಹಚ್ಚಿದ್ದರು. ವೀಸಾ ಅವಧಿ ಮುಗಿದಿದ್ದರೂ ಗೋಕರ್ಣದಲ್ಲೇ ತಂಗಿದ್ದ ವಿಷಯ ಬಹಿರಂಗವಾದ ಬಳಿಕ, ಅವರನ್ನು ಅಪಾಯಕಾರಿ ಸ್ಥಳದಿಂದ ಸುರಕ್ಷಿತವಾಗಿ ಹೊರತೆಗೆದು ತುಮಕೂರಿನ ವಿದೇಶಿಗರ ನಿಗಾ ಕೇಂದ್ರದಲ್ಲಿ ಇರಿಸಲಾಗಿತ್ತು.

ಈ ನಡುವೆ, ನೀನಾ ಅವರ ಪತಿ ಡೋರ್‌ಶ್ಲೋಮೋ ಗೋಲ್ಡ್‌ಸೈನ್ ಹೈಕೋರ್ಟ್‌ಗೆ ಮೊರೆ ಹೋಗಿ, ತಕ್ಷಣ ರಷ್ಯಾಗೆ ಕಳುಹಿಸುವಂತೆ ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಪೀಠ ವಿಚಾರಣೆ ನಡೆಸಿ, ರಷ್ಯಾಗೆ ಕಳುಹಿಸಲು ಸೂಚಿಸಿತು. ನಂತರ ಗೋಕರ್ಣ ಪೊಲೀಸರು ಮಕ್ಕಳ ಡಿಎನ್‌ಎ ಪರೀಕ್ಷೆ ನಡೆಸಿ, ಅವರು ನೀನಾ ಅವರೇ ಮಕ್ಕಳಾಗಿರುವುದು ದೃಢಪಡಿಸಿಕೊಂಡರು.

ಅಂತಿಮವಾಗಿ, ಗೋಕರ್ಣ ಪಿ.ಎಸ್.ಐ. ಶಶಿಧರ ಕೆ.ಎಚ್. ಅವರ ನೇತೃತ್ವದಲ್ಲಿ ಸಿಬ್ಬಂದಿ ಪರಮೇಶ್ವರ ಬಿ. ಹಾಗೂ ತುಮಕೂರು ಪಿ.ಎಸ್.ಐ. ಮಂಜುಳ ಅವರ ತಂಡ ನೀನಾ ಹಾಗೂ ಮಕ್ಕಳನ್ನು ಬೆಂಗಳೂರಿನ ವಿಮಾನ ನಿಲ್ದಾಣದಿಂದ ರಷ್ಯಾಗೆ ಕಳುಹಿಸುವಲ್ಲಿ ಯಶಸ್ವಿಯಾದರು.

 

 

 

Please Share: