ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಇಂದಿನ ದಿನಗಳಲ್ಲಿ ಹಣಕ್ಕಾಗಿ ಅನೇಕರು ಯಾವ ಮಟ್ಟಕ್ಕೂ ಇಳಿಯುವ ಸಂದರ್ಭಗಳ ನಡುವೆ, ಕಾರವಾರದಲ್ಲಿ ನಡೆದ ಘಟನೆಯೊಂದು ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಹೊಸ ಅರ್ಥ ನೀಡಿದೆ.
ಮಂಗಳವಾರ ನಗರದ ಅಂಬೇಡ್ಕರ್ ವೃತ್ತದ ಬಳಿ ಕೋಡಿಭಾಗದ ನಿವಾಸಿ ಸಚ್ಚಿನ್ ಬಾಲು ರೇವಂಡಿಕರ್ ಅವರಿಗೆ ರಸ್ತೆಯಲ್ಲಿ ₹500 ನೋಟುಗಳ ಕಟ್ಟು ಸಿಕ್ಕಿತ್ತು. ಹಣವನ್ನು ಪರಿಶೀಲಿಸಿದಾಗ ಒಟ್ಟು ₹50 ಸಾವಿರ ಇರುವುದಾಗಿ ತಿಳಿದುಬಂದಿತು. ಸ್ವತಃ ಆರ್ಥಿಕ ಸಂಕಷ್ಟದಲ್ಲಿದ್ದರೂ, ಅದು ತನ್ನ ಹಣವಲ್ಲ ಎಂಬ ಮನೋಭಾವದಿಂದ ಸಚ್ಚಿನ್ ಅವರು ಅದನ್ನು ವಾಪಸ್ ನೀಡಲು ಮುಂದಾದರು.
ಗಮನಾರ್ಹವೆಂದರೆ, ಸಚ್ಚಿನ್ ಅವರು ಇತ್ತೀಚೆಗೆ ಕಿಡ್ನಿ ವೈಫಲ್ಯದಿಂದ ಬಳಲಿದ್ದು, ಪತ್ನಿಯ ಕಿಡ್ನಿ ಪ್ರತಿರೋಪಣೆಯ ನಂತರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಅವರು ಪರರ ಹಣದ ಮೇಲೆ ಆಸೆಪಡದೆ ನಡೆದುಕೊಂಡಿರುವುದು ವಿಶೇಷವಾಗಿದೆ.
ಸಚ್ಚಿನ್ ಅವರು ತಕ್ಷಣ ಕಾರವಾರ ನಗರ ಪೊಲೀಸ್ ಠಾಣೆಗೆ ತೆರಳಿ, ಪಿಎಸ್ಐ ಉದ್ದಪ್ಪ ಅವರಿಗೆ ಹಣವನ್ನು ಒಪ್ಪಿಸಿದರು. ಮಾಹಿತಿ ಪಡೆದ ಪಿಎಸ್ಐ ಉದ್ದಪ್ಪ ಅವರು ಹಣ ಸಿಕ್ಕ ಸ್ಥಳದಲ್ಲಿ ಪರಿಶೀಲನೆ ನಡೆಸಿ, ನಿಜವಾದ ಮಾಲೀಕರನ್ನು ಪತ್ತೆಹಚ್ಚಲು ಕ್ರಮ ಕೈಗೊಂಡರು.
ಈ ವೇಳೆ ಕಾರವಾರದ ನಿವೃತ್ತ ತಹಶೀಲ್ದಾರ್ ಎಫ್. ಶೇಖ್ ಅವರು ತಾವು ಬ್ಯಾಂಕ್ನಿಂದ ಹಣ ತೆಗೆಯುವಾಗ ದಾರಿಯಲ್ಲಿ ಕಳೆದುಕೊಂಡಿರುವುದಾಗಿ ತಿಳಿಸಿ ಠಾಣೆಗೆ ಬಂದರು. ಪರಿಶೀಲನೆಯ ಬಳಿಕ ಪಿಎಸ್ಐ ಉದ್ದಪ್ಪ ಅವರ ಸಮ್ಮುಖದಲ್ಲಿ ಸಚ್ಚಿನ್ ಅವರಿಂದಲೇ ಹಣವನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಈ ಘಟನೆಯು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಹಣ ಕಳೆದುಕೊಂಡ ವ್ಯಕ್ತಿಯು ಸಚ್ಚಿನ್ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದು, ಕಾರವಾರ ನಗರ ಠಾಣೆಯ ಅಧಿಕಾರಿಗಳೂ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಕಷ್ಟಗಳ ನಡುವೆಯೂ ಸತ್ಯನಿಷ್ಠೆಯಿಂದ ನಡೆದುಕೊಂಡ ಸಚ್ಚಿನ್ ಅವರಂತಹವರು ಸಮಾಜಕ್ಕೆ ಮಾದರಿಯಾಗಿದ್ದು, ಇಂತಹ ಘಟನೆಗಳು ಮಾನವೀಯ ಮೌಲ್ಯಗಳನ್ನು ಉಳಿಸುವಲ್ಲಿ ಪ್ರೇರಣೆಯಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
