ಕರಾವಳಿ ವಾಯ್ಸ್ ನ್ಯೂಸ್
ಯಲ್ಲಾಪುರ: ಪಟ್ಟಣದ ಪ್ರಸಿದ್ಧ ದೊಡ್ಡಬೇಣ ಹಣ್ಣು, ಕಾಯಿ ಹಾಗೂ ಪೂಜಾ ಸಾಮಗ್ರಿಗಳ ಗೊಡನ್‌ಗೆ ಬೆಳ್ಳಂ ಬೆಳಗ್ಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ಶನಿವಾರ ಮುಂಜಾನೆ ನಡೆದಿದೆ.
ವೆಂಕಟರಮಣ ಮಠದ ಹಿಂಬಾಗದಲ್ಲಿರುವ ಐ.ಬಿ. ರಸ್ತೆಯ ಯೂನಿಯನ್ ಬ್ಯಾಂಕ್ ಕಟ್ಟಡದ ತಳಮಹಡಿಯಲ್ಲಿ ನಾರಾಯಣ ದೊಡ್ಡಬೇಣ ಎಂಬುವರ ಮಾಲಿಕತ್ವದ ಗೊಡನ್‌ನಲ್ಲಿ ತೆಂಗಿನಕಾಯಿ, ಬಾಳೆಕಾಯಿ ಹಾಗೂ ದೇವರ ಪೂಜಾ ಸಾಮಗ್ರಿಗಳ ಸಂಗ್ರಹ ಇತ್ತು. ಮುಂಜಾನೆ ವೇಳೆ ಗೊಡನ್‌ನಿಂದ ಹೊಗೆ ಹೊರಹೊಮ್ಮುತ್ತಿರುವುದು ವಾಯುವಿಹಾರಕ್ಕೆ ತೆರಳಿದ್ದವರಿಗೆ ಕಾಣಿಸಿಕೊಂಡಿದ್ದು, ತಕ್ಷಣ ಮಾಲೀಕರಾದ ನಾರಾಯಣ ಅವರಿಗೆ ಮಾಹಿತಿ ನೀಡಿದರು.
ಘಟನೆಯ ವೇಳೆ ಗೊಡನ್‌ನೊಳಗಿನ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದರೂ ಅಗ್ನಿಶಾಮಕ ಸಿಬ್ಬಂದಿಗಳು ಸಮಯಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಕೈಗೊಂಡು ಹೆಚ್ಚಿನ ಪ್ರಮಾದವನ್ನು ತಪ್ಪಿಸಿದರು.
ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ನಿಖರವಾಗಿಲ್ಲ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.


