ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ:ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮಂಗಳೂರು ಮೂಲದ ಆರು ಮಂದಿ ಆರೋಪಿಗಳಿಂದ ಜೈಲಿನಲ್ಲಿ ಭಾರೀ ಗಲಾಟೆ ನಡೆದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಜೈಲಿನ ಒಳಗಲ್ಲಿದ್ದ ಟಿವಿ ಸೇರಿದಂತೆ ಹಲವಾರು ವಸ್ತುಗಳನ್ನು ನಾಶಮಾಡಿದ ಈ ಆರೋಪಿಗಳ ವರ್ತನೆ ಜೈಲು ಸಿಬ್ಬಂದಿಗೆ ಆತಂಕಕ್ಕೆ ಕಾರಣವಾಗಿದೆ.

ಮುಂಬರುವ ದಿನಗಳಲ್ಲೇ ಮಾದಕ ವಸ್ತುಗಳ ವಹಿವಾಟಿಗೆ ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿದ್ದ ಹಿನ್ನೆಲೆಯಲ್ಲಿ, ಕೆಲ ದಿನಗಳ ಹಿಂದೆ ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಸಿಬ್ಬಂದಿಗಳ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ಈ ಪ್ರಕರಣದಲ್ಲಿ ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಪ್ರಮುಖ ಆರೋಪಿಗಳಾಗಿದ್ದರು.

ಈ ಆರೋಪಿಗಳು ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ರೌಡಿಗಳು ಎಂಬುದು ತಿಳಿದುಬಂದಿದೆ. ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಕಾರಣ, ಅವರನ್ನು ಕಾರವಾರ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಮೊನ್ನೆಯ ಹಲ್ಲೆ ಪ್ರಯತ್ನದ ಬೆನ್ನಲ್ಲೇ ಇಂದು ಉಳಿದ ಸಹಚರರು ಜೈಲಿನೊಳಗೆ ಮತ್ತೊಮ್ಮೆ ದಾಂಧಲೆ ನಡೆಸಿದ್ದಾರೆ.

ಜೈಲಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕಾರವಾರ ನಗರ ಠಾಣೆ ಪೊಲೀಸರು ತಕ್ಷಣ ಜೈಲಿಗೆ ದೌಡಾಯಿಸಿದರು. ಇದೇ ವೇಳೆ ಕಾರವಾರ ವಿಭಾಗದ ಡಿ.ವೈ.ಎಸ್.ಪಿ ಗಿರೀಶ್ ಕೂಡ ಜೈಲಿನಲ್ಲೇ ಮೊಕ್ಕಾಂ ಹೂಡಿ, ಪರಿಸ್ಥಿತಿಯನ್ನು ತಹಬದಿಗೆ ತರಲು ಹರಸಾಹಸ ಪಟ್ಟಿದ್ದಾರೆ.

ಜೈಲಿನಲ್ಲಿ ನಿತ್ಯನಿತ್ಯವೂ ಉಂಟಾಗುತ್ತಿರುವ ಗಲಾಟೆ ಪ್ರಕರಣಗಳಿಂದ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಚರ್ಚೆಗಳು ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸೂಚನೆಗಳು ದೊರಕುತ್ತಿವೆ.

 

 

Please Share: