ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ರಾಮನಗರದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದ ಘಟನೆ ಸ್ಥಳೀಯರಲ್ಲಿ ಬೆಚ್ಚಿಬೀಳುವಂತಾಗಿದೆ. ರಾಮನಗರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮೈದಾನದಲ್ಲಿ ಪತ್ತೆಯಾದ ಶವವು ಅಚ್ಚರಿ ಮತ್ತು ಆತಂಕ ಮೂಡಿಸಿದೆ.

ಮೃತನನ್ನು ಜೋಯಿಡಾ ತಾಲೂಕಿನ ಕುಂಭಾರವಾಡದ ಉಮೇಶ್ ನಾಯಕ್ (42) ಎಂದು ಗುರುತಿಸಲಾಗಿದೆ. ಅವರು ಕಳೆದ ಹಲವು ವರ್ಷಗಳಿಂದ ರಾಮನಗರದ ಕಲ್ಲು ಖಾನೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬೆಳಿಗ್ಗೆ ವಾಕಿಂಗ್‌ಗೆ ಬಂದ ಸ್ಥಳೀಯರು ಮೈದಾನದಲ್ಲಿ ಶವ ಪತ್ತೆ ಮಾಡಿ ತಕ್ಷಣ ರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಉಮೇಶ್ ನಾಯಕ್ ಕಳೆದ ಎರಡು ದಿನಗಳಿಂದ ಆಹಾರ ಸೇವನೆ ಮಾಡದೇ ಅತಿಯಾಗಿ ಮದ್ಯಪಾನ ಮಾಡುತ್ತಿದ್ದರೆಂಬ ಮಾಹಿತಿ ದೊರೆತಿದೆ. ಅದರಿಂದಲೇ ಸಾವಿನ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಖರ ಕಾರಣ ಪತ್ತೆಗೆ ಮುಂದಿನ ತನಿಖೆ ಮುಂದುವರಿದಿದೆ.

ಶಾಲಾ ಮೈದಾನದಲ್ಲಿ ಶವ ಪತ್ತೆಯಾದ ವಿಚಾರ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮದ್ಯಪಾನದ ಬಾಧೆ ಕುರಿತ ಚಿಂತನೆ ಮತ್ತೆ ಚುರುಕಾಗಿದೆ.

 

 

Please Share: